ದಕ್ಷಿಣ ಪಿನಾಕಿನಿ ನದಿಯ ನಕ್ಷೆನಡೆ ಮತ್ತು ನೈಸರ್ಗಿಕ ಸಮೀಕ್ಷೆ

ದಕ್ಷಿಣ ಪಿನಾಕಿನಿ ನದಿಯ ನಕ್ಷೆನಡೆ ಮತ್ತು ನೈಸರ್ಗಿಕ ಸಮೀಕ್ಷೆ
ದಕ್ಷಿಣ ಭಾರತದ ಶ್ರೇಷ್ಠ ನದಿಗಳಲ್ಲಿ ದಕ್ಷಿಣ ಪಿನಾಕಿನಿ ನದಿಯೂ ಒಂದು. ಈ ನದಿಯ ಮೂಲ ನಂದಿ ಪರ್ವತ ಶ್ರೇಣಿ, ನಂದಿ ಪರ್ವತದಲ್ಲಿ ಪಂಚ ನದಿಗಳಾದ ಪಾಲಾರ್ ನದಿ, ಪೆನ್ನಾರ್ ನದಿ, ಅರ್ಕಾವತಿ ನದಿ, ಉತ್ತರ ಪಿನಾಕಿನಿ ಮತ್ತು ದಕ್ಷಿಣ ಪಿನಾಕಿನಿ ನದಿಗಳು ಹುಟ್ಟುತ್ತವೆ. ಉತ್ತರಕ್ಕೆ ಹರಿಯುವ ಉತ್ತರ ಪಿನಾಕಿನಿ ನದಿಯು ಚಿತ್ರಾವತಿ ನದಿಯೊಂದಿಗೆ ಕೂಡಿ ಪೆನಗೊಂಡ ಹಾದಿಯಾಗಿ ಆಂಧ್ರಪ್ರದೇಶದ ರಾಮಸಮುದ್ರವನ್ನು ಸೇರುತ್ತದೆ. ಮತ್ತು ದಕ್ಷಿಣ ಮುಖವಾಗಿ ದಕ್ಷಿಣ ಪಿನಾಕಿನಿ ನದಿಯು ತಮಿಳುನಾಡಿನೆಡೆಗೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಪುರಾಣಗಳ ಪ್ರಕಾರ ನಾರದ ಮಹರ್ಷಿಯು ದಕ್ಷಿಣ ಪಿನಾಕಿನಿ ನದಿಯಲ್ಲಿ ಸ್ನಾನ ಮಾಡಿದರು ಎಂಬುದನ್ನು ಶನೇಶ್ವರ ಕಲ್ಯಾಣ ಎಂಬ ಪೌರಾಣಿಕ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ. ದಕ್ಷಿಣ ಪಿನಾಕಿನಿ ನದಿಯನ್ನು ಕ್ಷೀರ ನದಿಯೆಂದು ಕೂಡ ಕರೆಯುತ್ತಾರೆ.

pinakini river

ಕೆಲವು ತಿಂಗಳುಗಳಿಂದ ಈ ನದಿಯ ಮೂಲವನ್ನು ಹುಡುಕುತ್ತಾ ಹೊರಟ ನಮಗೆ ಸಾಕಷ್ಟು ವಿಷಯಗಳು ತಿಳಿದವು. ಮೊದಲು ನದಿಯ ಮೂಲ ಹುಡುಕಲು ನಂದಿ ಗ್ರಾಮಕ್ಕೆ ಹೋದೆವು. ಅಲ್ಲಿನ ಕೆಲವು ಹಿರಿಯ ನಾಗರೀಕರೊಂದಿಗೆ ಸಂದರ್ಶನ ಮಾಡುತ್ತಾ ಹೊರಟು ವಿಡಿಯೋ, ಛಾಯಾಚಿತ್ರ ಮತ್ತು ಕೆಲವು ವಿಶೇಷ ವಿಷಯಗಳನ್ನು ತಿಳಿದುಕೊಂಡೆವು. ಈರೀತಿಯಾಗಿ ಈ ನದಿಯು ಮೂಲದಿಂದಲೇ ನಮಗೆ ಒಂದು ಸಂಶೋಧನ ವಿಷಯವಾಗಿ ರೂಪುಗೊಂಡಿತು.
ಮೂಲದಿಂದ ದಕ್ಷಿಣ ಮುಖವಾಗಿ ಹರಿಯುವ ಪಿನಾಕಿನಿ ನದಿಯು ಸುಮಾರು ನೂರಕ್ಕು ಹೆಚ್ಚು ಕೆರೆಗಳನ್ನು ಬಳಸಿ ಹರಿಯುತ್ತದೆ. ಅವುಗಳಲ್ಲಿ ಕಂದಾವರ ಕೆರೆ, ಅಜ್ಜವಾರ ಕೆರೆ, ಶಿಡ್ಲಘಟ್ಟ ಕೆರೆ(ಅಮ್ಮನ ಕೆರೆ), ಬದ್ಧನ ಕೆರೆ, ವೆಂಕಟಗಿರಿ ಕೆರೆ, ಬೂದಿಗೆರೆ ಕೆರೆ, ಹೊಸಕೋಟೆ ಕೆರೆ, ಶೆಟ್ಟರ ಕೆರೆ(ಯಲ್ಲಮಲ್ಲಪ್ಪನ ಕೆರೆ), ವರ್ತೂರ್ ಕೆರೆ ಈ ಎಲ್ಲ ಕೆರೆಗಳನ್ನ ಬಳಸಿ ಬಾಗಲೂರು ಹಾದಿಯಾಗಿ ತಮಿಳುನಾಡನ್ನು ಸೇರುತ್ತದೆ.
ದಕ್ಷಿಣ ಪಿನಾಕಿನಿಯು ಹಿಂದಿನ ಕಾಲದಲ್ಲಿ ಜೀವನದಿಯಾಗಿತ್ತು. ಈ ಕ್ಷೀರ ನದಿಯ ನೀರನ್ನ ವ್ಯವಸಾಯಕ್ಕೆ ಅಷ್ಟೇ ಅಲ್ಲದೆ ಕುಡಿಯಲೂ ಬಳಸುತ್ತಿದ್ದರು ಎಂಬುದನ್ನು ಕೆಲವರು ಹಿರಿಯರು ಹೇಳುತ್ತಾರೆ. ಆದರೆ ಇಂದು ನದಿಯು ತನ್ನ ಪಥವನ್ನೇ ಮರೆಯುವ ಸ್ಥಿತಿಗೆ ತಲುಪಿದೆ, ಕಾರಣ ಮಳೆ ಅಭಾವ ಮತ್ತು ಮಿತಿ ಮೀರಿ ಬೆಳೆಯುತ್ತಿರುವ ನಗರೀಕರಣ ಕಾರಣೀಕೃತವಾಗಿವೆ.
ದಕ್ಷಿಣ ಪಿನಾಕಿನಿ ನದಿಯ ಹರಿವಿನಲ್ಲಿ ಹೊಸಕೋಟೆ ಕೆರೆ, ಶೆಟ್ಟರ ಕೆರೆ, ವರ್ತೂರು ಕೆರೆಗಳು ಪ್ರಮುಖ ಪಾತ್ರವಹಿಸಿವೆ.
ಹೊಸಕೋಟೆ ಕೆರೆ : ನಂದಿಯಿಂದ ಹರಿದು ಬರುವ ಈ ನದಿಯು ಹೊಸಕೋಟೆ ಕೆರೆ ಸೇರುವಷ್ಟರಲ್ಲಿ ಹಲವಾರು ಕೆರೆಗಳನ್ನು ಹಾದು ಬಂದು ಸೇರುತ್ತದೆ. ಅವುಗಳು ನಲ್ಲೂರು ಕೆರೆ, ಬಾಲೇಪುರ ಕೆರೆ, ಸೂಲಿಬೆಲೆ ಕೆರೆ, ಯನಗುಂಟೆ ಕೆರೆ, ಗಂಗವಾರ ಕೆರೆ, ಕಮ್ಮಸಂದ್ರ ಕೆರೆ, ಹಸಿಗಾಳ ಕೆರೆ, ಅಂಧ್ರಹಳ್ಳಿ ಕೆರೆ, ಲಕ್ಕೊಂಡ ಕೆರೆ, ತಿರುಮೇನಹಳ್ಳಿ, ಚೌಡಪ್ಪನ ಹಳ್ಳಿ, ಜ್ಯೋತಿಪುರ, ರಘುವಿನಹಳ್ಳಿ, ಲಗುಮೇನಹಳ್ಳಿ, ಬೊಮ್ಮನಹಳ್ಳಿ, ಮಂಡೂರು, ಹುಸ್ಕೂರು, ಶಂಕಿಣೀಪುರು ಇನ್ನೂ ಮುಂತಾದ ಹಳ್ಳಿಗಳ ಕೆರೆಗಳ ಮೂಲಕ ಹರಿದು ಬಂದು ಹೊಸಕೋಟೆ ಕೆರೆಯ ಮುಖೇನ ಮತ್ತೆ ದಕ್ಷಿಣಕ್ಕೆ ತಮಿಳುನಾಡಿನ ಮೆಟ್ಟೂರು ಕಡೆಗೆ ತನ್ನ ಪಯಣವನ್ನು ಮುಂದುವರೆಸುತ್ತದೆ.
ಹೊಸಕೋಟೆಯ ದೊಡ್ಡಮ್ಮಣ್ಣಿ ಕೆರೆ ಈ ಹಿಂದಿನ ಎಲ್ಲ ಕೆರೆಗಳಿಗಿಂತಲು ವಿಸ್ತಾರದಲ್ಲಿ ದೊಡ್ದದಾಗಿದ್ದು, ನಾಣ್ನುಡಿಯಲ್ಲಿ ’ ಕೆರೆಗಳಲ್ಲಿ ದೊಡ್ಡದು, ನದಿಗಳಲ್ಲಿ ಚಿಕ್ಕದು’ ಎಂದು ಕರೆಯಲ್ಪಟ್ಟಿದೆ.
ಹೊಸಕೋಟೆಯಲ್ಲಿನ ಕೆರೆಗಳಿಗೆ ದೊಡ್ಡಮ್ಮಣ್ಣಿ ಕೆರೆ ಮತ್ತು ಚಿಕ್ಕಮ್ಮಣ್ಣಿ ಕೆರೆ ಎಂದು ಹೆಸರಿಸುತ್ತಾರೆ.
ಸುಮಾರು ಕೆರೆಗಳ ನೀರು ಬಂದು ಸೇರುವ ದೊಡ್ಡಮ್ಮಣ್ಣಿ ಕೆರೆಯು ಹದಿಮೂರು ಕಿ.ಮೀ. ನಷ್ಟು ಉದ್ದ ಮತ್ತು ಅಷ್ಟೇ ಅಗಲ ವ್ಯಾಪ್ತಿಯಷ್ಟು ವಿಸ್ತಾರವಾಗಿದೆ. ಈ ಕೆರೆಯ ನಿರ್ಮಾಣವನ್ನು ಹೊಸಕೋಟೆಯ ಪಾಳೇಗಾರರಾದ ತಮ್ಮೇಗೌಡರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿದು ಬರುತ್ತದೆ. ಚಿಕ್ಕಮ್ಮಣ್ಣಿ ಕೆರೆಯು ದೊಡ್ಡಮ್ಮಣ್ಣಿ ಕೆರೆಗಿಂತ ವ್ಯಾಪ್ತಿಯಲ್ಲಿ ಚಿಕ್ಕದಾಗಿದ್ದರೂ ಸಹ, ಸುಮಾರು ಇಪ್ಪತ್ತೈದು ಕೆರೆಗಳ ನೀರು ಇಲ್ಲಿ ಬಂದು ಸೇರಿ, ಮತ್ತೆ ದೊಡ್ಡ ಕೆರೆಗೆ ಸೇರುತ್ತದೆ. ಹೀಗಾಗಿ ದೊಡ್ಡಮ್ಮಣ್ಣಿ ಕೆರೆಯ ನೀರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ದೊಡ್ಡ ಕೆರೆಯಾಗಿದ್ದು, ಇಲ್ಲಿನ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಾಯಕ್ಕೆ ಮೂಲಾಧಾರವಾಗಿತ್ತೆಂದು ಸಂದರ್ಶನಗಳ ಮೂಲಕ ತಿಳಿದು ಬರುತ್ತದೆ.

pinakini river
pinakini river

ಹೊಸಕೋಟೆಯ ದೊಡ್ಡಮ್ಮಣ್ಣಿ ಕೆರೆಯ ವಿಶಾಲತೆ ಈಗ ಇಲ್ಲವಾಗುತ್ತ ಹೋಗಿರುವುದು ನಾವು ಕೆರೆಯ ಈಗಿನ ಪರಿಸ್ಥಿತಿಯನ್ನು ನೋಡಿದಾಗ ನಮ್ಮ ಅರಿವಿಗೆ ಬರುತ್ತದೆ, ಕಾರಣ ಕೆರೆಯ ಅಂಚಿನ ಭಾಗವೆಲ್ಲ ಚಿಕ್ಕ ಚಿಕ್ಕ ಉದ್ಯಾನಗಳಂತೆ ಕಾಣುವ ವಾಣಿಜ್ಯ ಬೆಳೆಗಳಾದ ಗುಲಾಬಿ, ತರಕಾರಿ ತೋಟಗಳು, ಕೊಳವೆ ಬಾವಿಗಳು, ಕಟ್ಟಡಗಳು, ಶಾಲೆಗಳು ಹೀಗೆ ಎಲ್ಲಾ ವರ್ಗದ ಜನರು ಒತ್ತುವರಿ ಮಾಡಿಕೊಂಡಿರುವುದರಿಂದ ಕೆರೆಯು ಬಟ್ಟ ಬಯಲಿನಂತೆ ಕಾಣುತ್ತದೆ. ಈ ಕೆರೆಯು ತುಂಬಿ ಸುಮಾರು ಇಪ್ಪತ್ತೈದು ವರ್ಷಗಳಾಗಿವೆ ಎಂದು ಇಲ್ಲಿನ ಕೃಷಿಕರು ಹೇಳುತ್ತಾರೆ. ಈಗ ಹೊಸಕೋಟೆ ಕೆರೆಯ ದೆಸೆಯಿಂದಾಗಿ ಜೀವವೇ ಕಳೆದುಕೊಂಡಂತಾಗಿರುವ ಪಿನಾಕಿನಿ ನದಿಗೆ ಜೀವವೇ ಇಲ್ಲದಂತ ಭಾವ ಗ್ರಹಿಸಿದಂತಾಗುತ್ತದೆ.
ಹೀಗೆ ನೀರಿಲ್ಲದ ಹೊಸಕೋಟೆ ಕೆರೆಯನ್ನ ನೋಡುತ್ತಾ ಹೊರಟ ನಮಗೆ, ದಕ್ಷಿಣ ಪಿನಾಕಿನಿಗೆ ಮರುಜೀವ ಕೊಟ್ಟಂತಹ ಕೆರೆ ’ಶೆಟ್ಟರ ಕೆರೆ’ ಅಥವ ಯಲ್ಲಮಲ್ಲಪ್ಪನ ಕೆರೆ.
ಶೆಟ್ಟರ ಕೆರೆ : ಹೊಸಕೋಟೆಯಿಂದ ದಕ್ಷಿಣ ಪಿನಾಕಿನಿ ನದಿ ಮುಂದೆ ಸಾಗುತ್ತಾ ಕನ್ನಮಂಗಲ, ಸೀಗೇಹಳ್ಳಿ, ಕೆ.ಮಲ್ಲಸಂದ್ರ ಕೊರಳೂರು ಮುಖವಾಗಿ ಹರಿಯುವಾಗ ಕೃಷ್ಣರಾಜಪುರದ ಕೆರೆಯ ಮುಖೇನ, ಶೆಟ್ಟರ ಕೆರೆಯ ಹಾದಿಯಾಗಿ ಹರಿದು ಬರುವ ಬೆಂಗಳೂರು ಉತ್ತರದಿಂದ ಬರುವ ಕೊಳಚೆ ನೀರು ಸೀಗೆಹಳ್ಳಿಯ ಬಳಿ ದಕ್ಷಿಣ ಪಿನಾಕಿನಿಯನ್ನು ಕೂಡುತ್ತದೆ. ಈ ಕೊಳಚೆ ನೀರು ಯಲಹಂಕ, ಹೆಬ್ಬಾಳ, ನಾಗವಾರ, ದೊಡ್ಡಗುಬ್ಬಿ, ಬಾಗಲೂರು ಹೀಗೆ ನಗರದ ಕೊಳಚೆಯನ್ನು ದಕ್ಷಿಣ ಪಿನಾಕಿಗೆ ಸೇರಿಸುತ್ತವೆ. ಹೀಗೆ ದಕ್ಷಿಣ ಪಿನಾಕಿನಿ ಕೊಳಚೆ ನೀರಾಗಿ ಜೀವ ಪಡೆದು, ಜೀವನದಿಯಾಗಿ ಮುಂದೆ ಸಾಗುತ್ತದೆ. ಈ ನೀರು ವಿಷಪೂರಿತವಾಗಿರುವುದರಿಂದ ವ್ಯವಸಾಯಕ್ಕೆ ಯೋಗ್ಯವಲ್ಲದಂತಾಗಿದ್ದರೂ ಎಚ್ಚರಿಕೆಯಿಂದ ಬಳಸಲೇಬೇಕಾದ ಅನಿವಾರ್ಯತೆ ಏರ್ಪಟ್ಟಿದೆ. ಈ ರೀತಿಯಾಗಿ ಶೆಟ್ಟರ ಕೆರೆ ಸೀಗೇಹಳ್ಳಿ ಹಾದಿಯಾಗಿ ಹರಿದು ಮುಂದೆ ಕಾಡುಗೋಡಿ, ಮಲ್ಲಸಂದ್ರ, ಕೊರಳೂರು, ತಿರುಮಲ ಶೆಟ್ಟಿಹಳ್ಳಿ, ಚೆನ್ನಸಂದ್ರ, ನಾಗೊಂಡಹಳ್ಳಿ, ಸಮೇತನಹಳ್ಳಿ ಮುಖೇನ ಹರಿಯುತ್ತದೆ. ಸಮೇತನಹಳ್ಳಿ ಬಳಿ ವರ್ತೂರು ಕೆರೆಯ ನೀರು ಹರಿದು ಬಂದು ದಕ್ಷಿಣ ಪಿನಾಕಿನಿಯೊಂದಿಗೆ ಕೂಡಿ ತಮಿಳುನಾಡಿನೆಡೆಗೆ ರಭಸದಿಂದ ಹರಿಯುತ್ತದೆ.
ವರ್ತೂರು ಕೆರೆ : ಈ ವರ್ತೂರು ಕೆರೆಗೆ ಕೆಂಬಾಬುದಿ ಕೆರೆ, ಸಂಪಿಗೆಹಳ್ಳಿ ಕೆರೆ, ಹಲಸೂರು ಕೆರೆ, ದೊಮ್ಮಲೂರು ಕೆರೆ, ಬೆಳ್ಳಂಡೂರು ಕೆರೆ ಹೀಗೆ ನಗರದ ಎಲ್ಲಾ ಕೊಳಚೆಯುಕ್ತ ಕೆರೆಗಳ ನೀರು ವರ್ತೂರು ಕೆರೆಯನ್ನು ಸೇರುತ್ತದೆ. ಈ ಕೆರೆಯಿಂದ ಬಂದ ನೀರು ಇಮ್ಮಡಿಹಳ್ಳಿ, ನಾಗೊಂಡಹಳ್ಳಿಯ ಮೂಲಕ ಸಮೇತನಹಳ್ಳಿಯ ಬಳಿ ದಕ್ಷಿಣ ಪಿನಾಕಿನಿಯೊಂದಿಗೆ ಸಂಗಮವಾಗುತ್ತದೆ.
ಮುಂದೆ ಹಾರೋಹಳ್ಳಿ, ನಾಗನಾಯಕನಕೋಟೆ, ಮುತ್ಕೂರು, ದಾಮೋದರ ನಗರ, ಬೆಳ್ಳಿಕೆರೆ, ಮುತ್ತುಕದಹಳ್ಳಿ, ಬ್ಯಾಲಹಳ್ಳಿ, ತತ್ತನೂರು, ತಿರುವರಂಗ, ಮುಗಳೂರು ಮತ್ತು ಗುಂಡೂರು ಹಾದಿಯಾಗಿ ಹರಿದು ಅಲ್ಲಿನ ಭತ್ತದ ಬೇಸಾಯಕ್ಕೆ ಮಾತ್ರ ಅನುಕೂಲಕರವಾಗಿದೆ. ಈ ಹಿಂದೆ ದೊಡ್ದ ನಾಲೆಯಂತೆ ಹರಿಯುತ್ತಿದ್ದ ದಕ್ಷಿಣ ಪಿನಾಕಿನಿ ಈಗ ಸಂಪೂರ್ಣವಾಗಿ ಕಲುಷಿತ ನೀರಾಗಿದ್ದು, ಆ ನೀರನ್ನು ಬೇಸಾಯಕ್ಕೆ ಮಾತ್ರ ಬಳಸಬಹುದಾಗಿದೆ. ಅದರಲ್ಲೂ ಬೇಸಾಯಕ್ಕೆ ಬಹು ಎಚ್ಚರಿಕೆಯಿಂದಲೆ ಬಳಸಬೇಕಾಗಿದೆ. ಭತ್ತ, ರಾಗಿ, ಗುಲಾಬಿ, ಕ್ಯಾರೆಟ್, ನವಿಲುಕೋಸು, ಎಲೆಕೋಸು, ಹೂಕೋಸು, ಟೊಮ್ಯಾಟೋ, ಬೀಟ್ರೂಟ್ ಮತ್ತು ಕೆಲವು ಸೊಪ್ಪು ಬೆಳೆಗಳಿಗಷ್ಟೇ ಈ ನೀರನ್ನು ಬಳಸಿ ಬೆಳೆಯಬಹುದು. ಹಿಂದೊಮ್ಮೆ ಇಲ್ಲಿನ ಜನರು ಕುಡಿಸಲು ಬಳಸುತ್ತಿದ್ದ ಈ ನದಿಯ ನೀರು ಈಗ ಕಲುಷಿತವಾಗಿರುವುದು ನುಂಗಲಾರದ ತುತ್ತಾಗಿ ಪರಿವರ್ತನೆಗೊಂಡಿದೆ.
ಮಗಳೂರು, ಗುಂಡೂರು ಮತ್ತು ಬಾಗಲೂರು ಮುಖೇನ ಈ ದಕ್ಷಿಣ ಪಿನಾಕಿನಿ ನದಿಯಲ್ಲಿ ಮರಳು ದಂಧೆ, ಟ್ಯಾಂಕರ್ ಬಳಸಿ ನೀರು ಮಾರಾಟ, ನಾಲೆಯನ್ನು ಕಿರಿದಾಗಿಸುವ ರಿಯಲ್ ಎಸ್ಟೇಟ್ ದಂಧೆಗಳನ್ನು ಈ ನದಿಯ ದಡದಲ್ಲಿ ಕಾಣಬಹುದಾಗಿದೆ. ವರ್ತೂರು ಬಳಿಯಂತೂ ಕೆರೆಯ ನೀರನ್ನು ವ್ಯವಸಾಯಕ್ಕೆ ಬಳಸಬಹುದಾಗಿದ್ದರೂ, ವ್ಯವಸಾಯದ ಎಲ್ಲಾ ಜಮೀನು ದೊಡ್ಡ ಅಪಾರ್ಟ್‌ಮೆಂಟ್‌ಗಳಾಗಿ ಪರಿವರ್ತನೆಗೊಂಡಿದೆ.
ದಕ್ಷಿಣ ಪಿನಾಕಿನಿ ನದಿಯು ಬಾಗಲೂರು ಮುಖಾಂತರ ಹೊಸೂರು ಬಳಿಯ ಅವಲಹಳ್ಳಿ ಅಣೆಕಟ್ಟು ಸೇರುತ್ತದೆ. ಅಲ್ಲಿಂದ ಮತ್ತೆ ದಕ್ಷಿಣ ಪಿನಾಕಿನಿ ಹೊಸ ರೂಪ ಪಡೆದು ಮುಂದೆ ಸಾಗುತ್ತದೆ. ಕಾರಣ ಅವಲಹಳ್ಳಿಯ ಬಳಿ ನೀರನ್ನು ಶುದ್ದಿಗೊಳಿಸುವ ಕ್ರಮವಿದ್ದು, ಶುದ್ದೀಕರಿಸಿದ ನೀರನ್ನು ಹೊಸೂರಿನ ಕೈಗಾರಿಕ ಪ್ರದೇಶದಲ್ಲಿ ಬಳಸುತ್ತಾರೆ ಎಂಬುದು ಸತ್ಯ ಸಂಗತಿಯಾಗಿದೆ. ಹೀಗೆ ತಮಿಳುನಾಡಿನಲ್ಲಿ ಬಳಕೆಯಾಗುವಷ್ಟು ದಕ್ಷಿಣ ಪಿನಾಕಿನಿ ನದಿಯು ಕರ್ನಾಟಕದಲ್ಲಿ ಬಳಕೆಯಾಗುತ್ತಿಲ್ಲ, ಅದರ ಬದಲಿಗೆ ಈ ನೀರನ್ನು ತಮಿಳುನಾಡಿಗೆ ಸರಾಗವಾಗಿ ಹರಿಯಲು ಅನುವು ಮಾಡಲಾಗಿದೆ.
pinakini river

Leave a comment

This site uses Akismet to reduce spam. Learn how your comment data is processed.