ಅಮ್ಮಿನಭಾವಿಯ ಶಾಂತೇಶ್ವರ ಮಠದಲ್ಲಿರುವ ಭಿತ್ತಿಚಿತ್ರಗಳು : ಡಾ. ಆರ್. ಹೆಚ್. ಕುಲಕರ್ಣಿ

ಅಮ್ಮಿನಭಾವಿಯ ಶಾಂತೇಶ್ವರ ಮಠದಲ್ಲಿರುವ ಭಿತ್ತಿಚಿತ್ರಗಳು

ಧಾರವಾಡ ಜಿಲ್ಲೆಯ ಅಮ್ಮಿನಭಾವಿ, ಪ್ರಾಚೀನ ಕಾಲದಿಂದಲೂ ಒಂದು ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿತ್ತು.೧ ಇಲ್ಲಿ ದೊರೆತ ಶಾಸನಾಧಾರಗಳು ಅಮ್ಮಿನಭಾವಿಯನ್ನು ಅಗ್ರಹಾರವೆಂದೇ ಹೇಳಿವೆ. ಅಮ್ಮಿನಭಾವಿಯ ಪ್ರಾಚೀನ ಇತಿಹಾಸದ ಕುರುಹಾಗಿ ಇಂದು ಉಳಿದುಗೊಂಡು ಬಂದಿರುವ ದಾಖಲೆಗಳೆಂದರೆ, ಜೈನ ಬಸದಿ ಮತ್ತು ಈಶ್ವರ ದೇವಾಲಯಗಳು. ಇವುಗಳು ಕಲ್ಯಾಣದ ಚಾಲುಕ್ಯರ ಕಾಲದ ವಾಸ್ತು ಪುರಾವೆಗಳಾಗಿವೆ. ಈ ಹಿನ್ನೆಲೆಯಲ್ಲಿ ನೋಡಿದಾಗ ನಂತರದ ಕಾಲದಲ್ಲಿಯೂ ಅಮ್ಮಿನಭಾವಿ ತನ್ನ ಸಾಂಸ್ಕೃತಿಕ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಬಂದಿತ್ತು ಎನ್ನುವುದಕ್ಕೆ ಇಲ್ಲಿನ ಶಾಂತೇಶ್ವರ ಮಠದಲ್ಲಿರುವ ಆಕರ್ಷಕ ವರ್ಣಚಿತ್ರಗಳು ಸಾಕ್ಷಿಯಾಗಿವೆ.

ಶಾಂತೇಶ್ವರ ಮಠದಲ್ಲಿನ ಚಿತ್ರಗಳ ಕುರಿತು ದಿ. ಡಾ. ಶಿವರಾಮ ಕಾರಂತರು೨ ಮೊಟ್ಟ ಮೊದಲ ಬಾರಿಗೆ ಬೆಳಕು ಚೆಲ್ಲಿದ್ದಾರೆ. ನಂತರದಲ್ಲಿ ಲಲಿತಕಲಾ ಅಕಾಡಮಿ, ಬೆಂಗಳೂರು ಹಾಗೂ ಕೆಲವು ಆಸಕ್ತರು ಇವುಗಳನ್ನು ದಾಖಲಿಸಿದ್ದಾರೆ.೩ ಆದರೆ ಯಾವ ಕೃತಿಗಳು ಕೂಡಾ ಚಿತ್ರಗಳ ಕುರಿತು ಹೆಚ್ಚಿನ ಬೆಳಕು ಚೆಲ್ಲುವುದಿಲ್ಲ. ಅಮ್ಮಿನಭಾವಿಯ ಶಾಂತೇಶ್ವರ ಮಠದ ಚಿತ್ರಗಳನ್ನು ಕಲಾ ಇತಿಹಾಸದ, ಅದರಲ್ಲೂ ಕರ್ನಾಟಕದ ಚಿತ್ರಕಲಾ ಇತಿಹಾಸದ ದೃಷ್ಟಿಯಿಂದ ಅಧ್ಯಯನವಾಗದೇ ಇರುವುದು ಸ್ಪಷ್ಟವಾಗುತ್ತದೆ. ಪ್ರಸ್ತುತ ಸಂಶೋಧನಾ ಪ್ರಬಂಧವು ಅಂತಹ ಒಂದು ಪ್ರಯತ್ನವನ್ನು ಮಾಡುತ್ತದೆ.

ಶಾಂತೇಶ್ವರ ಮಠದ ಚಿತ್ರಗಳನ್ನು ಅವುಗಳ ಕಥಾ ನಿರೂಪಣೆ, ಆಕೃತಿಗಳ ವಿನ್ಯಾಸ, ವರ್ಣ ಸಂಯೋಜನೆಗಳನ್ನು ಗಮನಿಸಿದಾಗ ಹಲವಾರು ವಿಶಿಷ್ಟವಾದ ಅಂಶಗಳು ಬೆಳಕಿಗೆ ಬರುತ್ತವೆ. ಮೊದಲನೆಯದಾಗಿ, ಶಾಂತೇಶ್ವರ ಮಠದ ಕಾಲವನ್ನು ಗಮನಿಸಿದಾಗ, ಅದರ ನಿರ್ಮಾಣದ ಕಾಲವು ಅಲ್ಲಿನ ಕಲ್ಯಾಣದ ಚಾಲುಕ್ಯರ ದೇವಾಲಯಗಳಷ್ಟು ಪ್ರಾಚೀವಾದದ್ದಲ್ಲ. ಪ್ರಸ್ತುತ ಮಠವನ್ನು ಹಳೆ ಮೈಸೂರು ಭಾಗದ ಅಥವಾ ಮಲೆನಾಡಿನ ತೊಟ್ಟಿ ಮನೆಯ ರೀತಿಯಲ್ಲಿ ಕಟ್ಟಲಾಗಿದೆ. ವಿಶಾಲವಾದ ಎರಡಂತಸ್ತಿನ ಮೊಗಸಾಲೆ, ಹಜಾರ, ಒಳಭಾಗದಲ್ಲಿ ತೊಟ್ಟಿ, ಸುತ್ತಲೂ ಕೈಸಾಲೆಯಂತೆ ತೆರೆದುಕೊಂಡಿರುವ ಕಟ್ಟೆಗಳಿವೆ. ಕಟ್ಟೆಗಳಿಗೆ ಹೊಂದಿಕೊಂಡಂತೆಯೇ ಹಲವು ಕೊಠಡಿಗಳಿವೆ. ಈ ಮಠದ ನಿರ್ಮಾಣದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಾಷ್ಟವನ್ನು ಉಪಯೋಗಿಸಲಾಗಿದ್ದು, ೧೮೫೦-೧೮೭೫ರ ಕಾಲಘಟ್ಟದಲ್ಲಿ ನಿರ್ಮಿಸಿರಬಹುದೆಂದು ತೋರುತ್ತದೆ.೪ ಈ ಮಠದ ನಿರ್ಮಾಣದ ಕಾಲವನ್ನು ಸೂಚಿಸುವ ಯಾವುದೇ ಲಿಖಿತ ದಾಖಲೆಗಳಿಲ್ಲ. ಹೀಗಾಗಿ ಇದರ ಕಾಲವನ್ನು ನಿರ್ಧರಿಸಲು, ಮಠದ ವಾಸ್ತು ಅಂಶಗಳನ್ನು ಮತ್ತು ಇಲ್ಲಿನ ಚಿತ್ರಗಳ ಶೈಲಿಯನ್ನು ಗಮನಿಸಿ ನಿರ್ಧರಿಸಬಹುದಾಗಿದೆ. ಅಂದರೇ ಇದರ ನಿರ್ಮಾಣದ ಕಾಲವು ಸುಮಾರು ಕ್ರಿ.ಶ.೧೮೫೦-೭೫ ಸರಿಸುಮಾರು ಇರಬಹುದೆಂದು ಹೇಳಬಹುದು. ಆದುದರಿಂದ ಇಲ್ಲಿನ ಚಿತ್ರಗಳು ಕೂಡ ಅದೇ ಕಾಲದಲ್ಲಿ ಅಥವಾ ಸ್ವಲ್ಪ ನಂತರದ ಕಾಲದಲ್ಲಿ ರಚನೆಗೊಂಡಿರಬಹುದಾದ ಸಾಧ್ಯತೆ ಇದೆ.

ಅಮ್ಮಿನಭಾವಿಯ ಶಾಂತೇಶ್ವರ ಮಠದಲ್ಲಿರುವ ವರ್ಣಚಿತ್ರಗಳ ನಿರೂಪಣೆ ಹಾಗೂ ಅವುಗಳ ವಿನ್ಯಾಸಗಳನ್ನು ಕುರಿತು ಈ ಕೆಳಗೆ ನೋಡಬಹುದು.

ಶಾಂತೇಶ್ವರ ಮಠದ ಚಿತ್ರಗಳನ್ನು ಭಿತ್ತಿ ಚಿತ್ರಗಳೆಂದು ಕರೆಯಬಹುದು. ಇಲ್ಲಿನ ಚಿತ್ರಗಳು ರಚನೆಯಾಗಿರುವ ಸ್ಥಳವು ಬಹು ಕುತೂಹಲಕಾರಿಯಾದ ಸ್ಥಳಾವಕಾಶವನ್ನು ಹೊಂದಿವೆ. ಶಾಂತೇಶ್ವರ ಮಠದ ಚಿತ್ರಗಳು ಭಿತ್ತಿಯ ಮೇಲೆ ಕಂಡುಬರುವುದಿಲ್ಲ, ಬದಲಾಗಿ ಕಟ್ಟಡದ ಒಳಗಡೆಇರುವ ಮೊದಲನೆಯ ಮಹಡಿಯ ಮಾಳಿಗೆಯ ತೊಟ್ಟಿಯೆಡೆಗೆ ಹೊರಚಾಚಿರುವ ಮರದ ಹಲಗೆಗಳ ’ಸಜ್ಜಾ’ಗಳ (ಛಿಚಿಟಿoಠಿಥಿ ) ಕೆಳಭಾಗಗಳಲ್ಲಿ ರಚನೆಯಾಗಿವೆ. ಮೊಗಸಾಲೆಯ ಕೆಳ ಮಹಡಿಯ ಒಳಮಾಳಿಗೆಯ ಮೇಲೂ ಕೆಲವು ಚಿತ್ರಗಳಿವೆ. ಹಾಗೂ ಮೊಗಸಾಲೆ ಹೊರಭಾಗದ ತಗಡಿನ ’ಸಜ್ಜಾ’ದ ಕೆಳಭಾಗದಲ್ಲೂ ಕಂಡುಬರುತ್ತವೆ.೫ ಸಾಮಾನ್ಯವಾಗಿ ಚಿತ್ರಗಳು ಭಿತ್ತಿಯಮೇಲೆ ರಚಿಸಲಾಗುತ್ತವೆ. ಆದರೇ ಇಲ್ಲಿ ಮಾತ್ರ ಚಿತ್ರ ರಚನಾ ಕೆಲಸವು ಸಜ್ಜಾದ ಹಲಗೆಗಳ ಮೇಲೆ ರಚನೆಯಾಗಿರುವುದು ವಿಶೇಷವಾಗಿದೆ.

ಶಾಂತೇಶ್ವರ ಮಠದ ಎಲ್ಲ ಚಿತ್ರಗಳನ್ನು ಸುಮಾರು ಎಂಟು ಅಂಗಲು ಎತ್ತರದ ಹಾಗೂ ಎರಡರಿಂದ ಮೂರು ಅಡಿ ಉದ್ದವಿರುವ ಮರದ ಹಲಗೆಗಳ ಮೇಲೆ ರಚಿಸಲಾಗಿದೆ. ತಾಂತ್ರಿಕವಾಗಿ ಇವುಗಳ ರಚನೆಯ ಕುರಿತಾಗಿ ನೋಡಿದರೆ, ಸಾಮಾನ್ಯವಾಗಿ ಭಿತ್ತಿ ಚಿತ್ರಗಳ ರಚನೆಯಲ್ಲಿ ಉಪಯೋಗಿಸುವ ವಿಧಿವಿಧಾನಗಳೇ ಇಲ್ಲಿಯೂ ಕಂಡುಬರುವುದು. ತಾಂತ್ರಿಕವಾಗಿ- ಚಿತ್ರಗಳನ್ನು ರಚಿಸುವ ಪೂರ್ವದಲ್ಲಿ ಹಿನ್ನೆಲೆಯನ್ನು ತಯಾರಿಸಿಕೊಳ್ಳಲಾಗಿದೆ. ಮರದ ಹಲಗೆಯ ಮೇಲೆ ಚಿತ್ರಗಳ ರಚನೆ ಇರುವುದರಿಂದ ಅದನ್ನು ನಯವಾಗಿ ಉಜ್ಜಿ ಅದರ ಮೇಲ್ಮೈಯನ್ನು ಚಿತ್ರ ರಚನೆಗೆ ಯೋಗ್ಯವಾಗಿ ಸಜ್ಜಿಕೆಗೊಳಿಸಿ ಬಿಳಿ ಹಿನ್ನೆಲೆಯನ್ನು ಹಾಕಿ ನಂತರದಲ್ಲಿ ಉದ್ದೇಶಿತ ಚಿತ್ರಗಳನ್ನುರಚಿಸಲಾಗಿದೆ.೬ ಇಲ್ಲಿನ ಎಲ್ಲ ಚಿತ್ರಗಳು ರೇಖಾ ಪ್ರಧಾನವಾದ ಚಿತ್ರಗಳಾಗಿವೆ. ರಚಿಸಲಾದ ಚಿತ್ರಗಳಲ್ಲಿ ಯೋಗ್ಯ ವರ್ಣಸಂಯೋಜನೆಯನ್ನು ನಾವು ಗಮನಿಸಬಹುದು.

ಪ್ರಸ್ತುತ ಚಿತ್ರಗಳಲ್ಲಿ ಹಲವಾರು ಕಥಾನಿರೂಪಣಾ ವಿಷಯಗಳು ಬಿಂಬಿತವಾಗಿವೆ. ಇಲ್ಲಿ ಧಾರ್ಮಿಕ, ಪೌರಾಣಿಕ ಕಥಾ ನಿರೂಪಣಾ ವಿಷಯಗಳು ಹಾಗೂ ಸಾಮಾಜಿಕ ವಿಷಯಗಳೂ ಕೂಡಾ ನಿರೂಪಣೆಗೊಂಡಿವೆ.

ಮಠದಲ್ಲಿ ಸಜ್ಜಾದ ಮೇಲಿನ ಚಿತ್ರಗಳ ಜೊತೆಯಲ್ಲಿ ತೊಟ್ಟಿಭಾಗದ ಮೊಗಸಾಲೆಯ ಹಿನ್ನೆಲೆ ಗೋಡೆಯ ಮೇಲೆ ಕೆಲವು ಭಿತ್ತಿಚಿತ್ರಗಳು ಕಂಡು ಯರುತ್ತವೆ. ಇಲ್ಲಿ ಅಷ್ಟ ದಿಕ್ಪಾಲಕರ ಚಿತ್ರಗಳಿದ್ದು ಎಲ್ಲ ಚಿತ್ರಗಳನ್ನು ಒಂದೇ ಸಾಲಿನಲ್ಲಿ ಪಟ್ಟಿಕೆಗಳ ಮಾದರಿಯಲ್ಲಿ ತೋರಿಸಲಾಗಿದೆ. ಹಳದಿ-ಕೆಂಪು ವರ್ಣಗಳೇ ಮುಖ್ಯವಾಗಿ ಕಂಡುಬರುವ ಈ ಚಿತ್ರಗಳು ರೇಖಾ ಪ್ರಧಾನವಾದವುಗಳೇ ಆಗಿವೆ.

ಸಜ್ಜಾದ ಕೆಳಗೆ ರಚನೆಗೊಂಡಿರುವ ಚಿತ್ರಗಳಲ್ಲಿ ಕಂಡು ಬರುವ ಮುಖ್ಯ ವಿಷಯ ನಿರೂಪಣೆಗಳನ್ನು ಗಮನಿಸಿದಾಗ ಆಶ್ಚರ್ಯವಾಗದೇ ಇರದು. ಇಲ್ಲಿ ಕಂಡುಬರುವ ಕಥಾ ನಿರೂಪಣೆಗಳಲ್ಲಿ ಮಹಾಭಾರತ, ಕೃಷ್ಣಲೀಲಾ, ಶಿವಲೀಲಾ ಚಿತ್ರಗಳಿವೆ. ಅಲ್ಲದೇ ಬಿಡಿಯಾಗಿ ಹಲವು ದೇವತಾ ಆಕೃತಿಗಳೂ ಕೂಡಾ ರಚನೆಗೊಂಡಿವೆ.

ಭಾಗವತ ಚಿತ್ರಗಳಲ್ಲಿ ಕೃಷ್ಣನ ಚಿತ್ರಗಳಿವೆ. ಕೃಷ್ಣನು ತನ್ನ ಭವ್ಯ ರೂಪಗಳಲ್ಲಿ ಒಂದನ್ನು ಅರ್ಜುನನಿಗೆ ಪ್ರಕಟಪಡಿಸುವ ದೃಶ್ಯ ಇಲ್ಲಿ ಗಮನ ಸೆಳೆಯುತ್ತದೆ. ಚಿತ್ರದಲ್ಲಿ ಪ್ರಾಣಿಯೊಂದನ್ನು ಸಂಯೋಜಿತ ಚಿತ್ರವಾಗಿ ತೋರಿಸಲಾಗಿದೆ. ಇದರಲ್ಲಿ ಗರುಡನ ಮುಖ, ಪ್ರಾಣಿಯ ದೇಹ, ಈ ಪ್ರಾಣಿಯಲ್ಲಿ ಕುದುರೆ ಕಾಲು, ನಂದಿಯ ಕಾಲು, ಆನೆಯ ಕಾಲುಗಳು, ಮೂರುಕಾಲುಗಳಾಗಿ ಕಂಡುಬಂದರೆ, ಮತ್ತೊಂದು ಮಾನುಷ ಕೈ ಕಾಲಾಗಿ ರಚನೆಗೊಂಡಿದೆ. ಇನ್ನು ಬಾಲವನ್ನು ಪಂಚಮುಖ ಸರ್ಪವಾಗಿ ಬಿಂಬಿಸಲಾಗಿದೆ. ಸಂಯೋಜಿತ ಪ್ರಾಣಿಯ ಬೆನ್ನಮೇಲೆ ಸರ್ಪದ ಕೆಳಗೆ ಕಾಳಿಂಗ ಮರ್ಧನದ ರೀತಿಯಲ್ಲಿ ನೃತ್ಯದ ಭಂಗಿಯಲ್ಲಿರುವ ಕೃಷ್ಣನ ಆಕೃತಿಯನ್ನು ನೋಡಬಹುದು. ಈ ಸಂಯೋಜಿತ ಆಕೃತಿಯ ಮುಂಭಾಗದಲ್ಲಿ ಪುರುಷ ಮಾನುಷಾಕೃತಿಯು ತನ್ನ ಎರಡು ಕೈಗಳನ್ನು ಮುಗಿದುಕೊಂಡು ಅದಕ್ಕೆ ನಮಸ್ಕಾರ ಮಾಡುವಂತೆ ಮುಂದೆ ನಿಂತಿದ್ದಾನೆ. ಈ ಸಂಯೋಜನೆಯನ್ನು ಒಟ್ಟಾರೆಯಾಗಿ ಗಮನಿಸಿದಾಗ ಈ ಪ್ರಸ್ತುತ ಚಿತ್ರವು ಒಂದು ವಿಶಿಷ್ಟವಾದ ದೃಶ್ಯ ನಿರೂಪಣೆಯೆಂಬುದು ಸ್ಪಷ್ಟವಾಗಿತ್ತದೆ.೭ ಈ ಚಿತ್ರದಲ್ಲಿ ಕೃಷ್ಣನು ತನ್ನ ವಿಶ್ವರೂಪವನ್ನು ಅರ್ಜುನನಿಗೆ ತೋರಿಸುವಂತೆ, ಸಂಯೋಜಿತ ಪ್ರಾಣಿಯ ರೂಪದಲ್ಲಿ ತೋರಿಸುತ್ತಿದ್ದಾನೆ. ಏಕೆಂದರೆ, ನಾಲ್ಕೂ ಕಾಲುಗಳಲ್ಲಿ ಒಂದನ್ನು ಕೈಯಾಗಿ ತೋರಿಸಿದ್ದು ಅದರಲ್ಲಿ ಚಿತ್ರವನ್ನು ಹಿಡಿದಿರುವ ರೀತಿ ಮತ್ತು ಅದನ್ನು ತೋರಿಸಿರುವ ವಿಧಾನಗಳು ಅತ್ಯಂತ ಅರ್ಥಗರ್ಭಿತವಾಗಿ ಸಾಂಕೇತಿಕವಾಗಿ ಮೂಡಿ ಬಂದಿವೆ. ಇದಕ್ಕೆ ಪೂರಕವಾಗಿ ಸಾಂಕೇತಿಕವಾಗಿ ಕೃಷ್ಣನು ನೃತ್ಯಭಂಗಿಯಲ್ಲಿ, ಪ್ರಾಣಿಯ ಮೇಲೆ ಬಾಲದ ರೂಪದ ಸರ್ಪದ ಕೆಳಗೆ ನಿಂತಿರುವುದು ಈ ವಿವರವನ್ನು ಬಲಪಡಿಸುವಂತಿದೆ. ಈ ಚಿತ್ರವನ್ನು ಆಯತಾಕಾರದ ಹಲಗೆಯ ಮೇಲೆ ರಚಿಸಿದೆ. ಹಿನ್ನೆಲೆಯ ವರ್ಣ ಕೆಂಪು ಹಾಗೂ ವಿನ್ಯಾಸದ ಚೌಕಟ್ಟನ್ನು ಒದಗಿಸಿರುವ ಈ ಚಿತ್ರದಂತೆಯೇ ಬಹುತೇಕ ಎಲ್ಲ ಚಿತ್ರಗಳು ವಿನ್ಯಾಸಗೊಂಡಿವೆ. ಕೆಲವೊಂದು ಹಲಗೆಗಳಲ್ಲಿ ಮಧ್ಯಕ್ಕೆ ಸರಿಯಾಗಿ ಪುಷ್ಪದ ಉಬ್ಬು ಕೆತ್ತನೆಯೂ ಕಂಡುಬರುತ್ತದೆ.

ಈ ಮೇಲಿನ ವಿನ್ಯಾಸದಲ್ಲಿ ರಚಿಸಿರುವ ಚಿತ್ರದಲ್ಲಿ ಸರ್ಪಶಯನ ವಿಷ್ಣು ಮತ್ತು ರಾಮಸೀತಾರನ್ನು ಬೇರೆ ಬೇರೆಯಾಗಿ ಚಿತ್ರಿಸಲಾಗಿದೆ. ವಿಷ್ಣುವು ತನ್ನ ಸರ್ಪಾಸನದ ಮೇಲೆ ಅರ್ಧ ಮಲಗಿದ್ದು ಲಕ್ಷ್ಮೀದೇವಿಯು ಅವನ ಕಾಲುಗಳನ್ನು ಒತ್ತುತ್ತಿದ್ದಾಳೆ. ಅವನ ನಾಭಿಯಿಂದ ಬ್ರಹ್ಮನು ಉದ್ಭವಗೊಂಡಿದ್ದಾನೆ. ವಿಷ್ಣುವಿನ ಪಾದದ ಹತ್ತಿರ ತಂಬೂರಿಧಾರಿ ನಾರದನ ಚಿತ್ರಣವಿದೆ. ಇನ್ನೊಂದು ಭಾಗದಲ್ಲಿ ರಾಮ ಸೀತೆಯರು ಆಸನವೊಂದರ ಮೇಲೆ ಕುಳಿತಿದ್ದು ಹನುಮಂತನು ವಿಧೇಯನಾಗಿ ಮುಂದೆ ನಿಂತಿದ್ದಾನೆ. ಚಿತ್ರದಲ್ಲಿ ವಿಷ್ಣು ಮತ್ತು ರಾಮರ ಆಕೃತಿಗಳ ಹಾವಭಾವಗಳನ್ನು ನೋಡಿದರೆ ಇಬ್ಬರೂ ಸಂವಾದದಲ್ಲಿ ತೊಡಗಿದಂತೆ ತೋರುತ್ತದೆ.೮ ಇದಾವುದರ ಪರಿವೇ ಇಲ್ಲದಂತೆ ಅವರ ಪತ್ನಿಯರು ಚಿತ್ರಣಗೊಂಡಿದ್ದಾರೆ. ಕೃಷ್ಣನಿಗೆ ಸಂಬಂಧಿಸಿದ – ಕೃಷ್ಣನು ರುಕ್ಮಿಣಿ ಸತ್ಯಭಾಮೆಯರೊಂದಿಗೆ ಇರುವ ದೃಶ್ಯದಲ್ಲಿ ಇಬ್ಬರೂ ಕೃಷ್ಣನನ್ನು ಶೃಂಗಾರದಲ್ಲಿ ಕರೆಯಲು ತಾಮುಂದು ನಾಮುಂದು ಎಂಬಂತೆ ಚಿತ್ರಣಗೊಂಡಿದ್ದಾರೆ. ಮಧ್ಯದಲ್ಲಿ ಕೃಷ್ಣನು ತನ್ನ ಎರಡೂ ಕೈಗಳನ್ನು ಹೊರಚಾಚಿ ನಿಂತಿದ್ದಾನೆ. ಇವರ ಎರಡೂ ಪಾರ್ಶ್ವಗಳಲ್ಲಿ ಈರ್ವರು ಸ್ತ್ರೀಯರು ಆರತಿ ತಟ್ಟೆಯನ್ನು ಹಿಡಿದು ನಿಂತಿದ್ದಾರೆ. ಅವರ ವಸ್ತ್ರವಿನ್ಯಾಸಗಳನ್ನು ಉತ್ತರ ಕರ್ನಾಟಕದ ಸಾಮಾನ್ಯ ಉಡುಗೆಯಂತೆ ಸೀರೆಯನ್ನು ಕಚ್ಚೆ ಹಾಕಿ ಉಟ್ಟುಕೊಂಡ ರೀತಿಯದ್ದಾಗಿದೆ. ಈ ಆಕೃತಿಗಳಲ್ಲಿ ಕಂಡುಬರುವ ಕೇಶವಿನ್ಯಾಸಗಳು ಬಹು ಸೊಗಸಾಗಿ ಮೂಡಿ ಬಂದಿದ್ದು ಸ್ಥಳೀಯ ಸೊಗಡನ್ನು ಅನುಸರಿಸುತ್ತವೆ.

ಶಿವನ ಸಭೆಯನ್ನು ಬಿಂಬಿಸುವ ಮತ್ತೊಂದು ಚಿತ್ರವು ಬಹು ಆಕರ್ಷಕವಾಗಿ ಆಕೃತಿಗಳ ವಿನ್ಯಾಸವನ್ನು ಹೊಂದಿದೆ. ಚಿತ್ರದ ಎಡಬದಿಗೆ ಪಂಚಮುಖ ಶಿವನು ಸುಖಾಸನದಲ್ಲಿ ಕುಳಿತಿದ್ದು ತನ್ನ ಎಡ ತೊಡೆಯ ಮೇಲೆ ಪಾರ್ವತಿಯನ್ನು ಕೂಡ್ರಿಸಿಕೊಂಡಿದ್ದಾನೆ. ಶಿವನ ಪಂಚ ಮುಖಗಳಿಗೆ ಪೂರಕವಾಗಿ ಶಿವನಿಗೆ ಇಲ್ಲಿ ಹತ್ತು ಕೈಗಳು ರಚನೆಯಾಗಿವೆ. ಎಲ್ಲ ಕೈಗಳಲ್ಲಿ ಒಂದೊಂದು ಆಯುಧಗಳನ್ನು ಚಿತ್ರಿಸಲಾಗಿದೆ. ಜಟಾಮುಕುಟಧಾರಿಯಾದ ಶಿವ ವಾಹನವಾದ ನಂದಿಯ ಚಿತ್ರಣವೂ ಇಲ್ಲಿ ಇದೆ. ತ್ರಿಪಾದ ಭೃಂಗಿ, ನಂದೀಶ, ಜೊತೆಯಲ್ಲಿ ಶೈವ ಭಕ್ತರು ಇದ್ದಾರೆ, ಶಿವನನ್ನು ಇಲ್ಲಿ ಬಿಳಿವರ್ಣದಿಂದ ತೋರಿಸಲಾಗಿದೆ. ಪ್ರತಿಮಾ ಲಕ್ಷಣಗಳಲ್ಲಿ ಬಿಂಬಿಸಿರುವಂತೆ, ಚಿತ್ರಲಕ್ಷಣಗಳಲ್ಲಿ ಕಂಡುಬರುವಂತೆ ಶಿವನ ರೂಪವನ್ನು ನೋಡಬಹುದು. ಸಂಯೋಜನೆಯಲ್ಲಿ ಶಿವನ ಎಲ್ಲ ಸಹಚರ ಆಕೃತಿಗಳು ಶಿವನೆಡೆಗೆ ದೃಷ್ಟಿಯನ್ನು ನೆಟ್ಟಿರುವುದು ಚಿತ್ರವಿನ್ಯಾಸದ ಭಾಗವಾಗಿ ಸ್ಪಷ್ಟತೆಯನ್ನು ನಿರ್ದೇಶಿಸುತ್ತವೆ.

ಅದೇ ರೀತಿ, ಲಕ್ಷ್ಮೀನರಸಿಂಹನನ್ನು ಬಿಂಬಿಸುವ ಚಿತ್ರದಲ್ಲಿ ಪದ್ಮಾಸನಧಾರಿಯಾದ ನರಸಿಂಹನು ತನ್ನ ಎಡ ತೊಡೆಯಲ್ಲಿ ತನ್ನ ಸಹಧರ್ಮಿಣಿ ಲಕ್ಷ್ಮಿಯನ್ನು ಕೂಡಿಸಿಕೊಂಡಿದ್ದಾನೆ. ಅಗಲವಾದ ಮುಖ, ದುಂಡನೆಯ ನೇರವಾದ ಆಕರ್ಷಕ ಕಣ್ಣುಗಳು, ತೆರೆದ ಬಾಯಿ, ಚತುರ್ಬಾಹುಗಳು, ನರಸಿಂಹನ ಆಕೃತಿಯನ್ನು ಸೊಗಸಾಗಿ ಕಾಣುವಂತೆ ಮಾಡಿದೆ. ನರಸಿಂಹನ ಆಕೃತಿಗೆ ಅಂದಿನ ಸಮಕಾಲೀನ ಚಿತ್ರಕಲೆಯಲ್ಲಿ ವಿಶೇಷವಾಗಿ ಮೈಸೂರು ಸಾಂಪ್ರದಾಯಿಕ ಶೈಲಿಯ ಶಿಬಿಯ ನರಸಿಂಹ ದೇವಾಲಯದ ಭಿತ್ತಿ ಚಿತ್ರಗಳ ಶೈಲಿಯನ್ನು ಇಲ್ಲಿ ಹೋಲಿಸಬಹುದು. ನರಸಿಂಹನ ತೊಡೆಯ ಮೇಲೆ ಕುಳಿತ ಲಕ್ಷ್ಮಿಯ ಆಕೃತಿಯನ್ನು ಮೇಲೆ ಚರ್ಚಿಸಿದ ಶಿವನ ಚಿತ್ರದ ಪಾರ್ವತಿಗೆ ಹೋಲಿಸಬಹುದು.

ಇವುಗಳ ಗುಂಪಿನಲ್ಲೇ ಬರುವ ಮತ್ತೊಂದು ಚಿತ್ರದಲ್ಲಿ ಶ್ವೇತಗಜದ ಮೇಲೆ ಅಂಬಾರಿಯಲ್ಲಿ ಕುಳಿತ ಸ್ತ್ರೀಯರು ಮತ್ತು ಅವರ ಮುಂದೆ ನಿಂತಿರುವ ಈರ್ವರು ಪುರುಷ ಆಕೃತಿಗಳನ್ನು ಹೊಂದಿರುವ ಚಿತ್ರ ಸಂಯೋಜನೆಯಲ್ಲಿ ಈ ಮೇಲಿನ ಚಿತ್ರವನ್ನೇ ಹೋಲುತ್ತದೆ.

ಸಾಮಾಜಿಕ ಚಿತ್ರಣಗಳಲ್ಲಿ ಎರಡು ಚಿತ್ರಗಳು ಗಮನ ಸೆಳೆಯುತ್ತವೆ. ಒಂದರಲ್ಲಿ ಗ್ರಾಮ ಪ್ರಮುಖರನ್ನು (ಹೆಸರಿನಿಂದ ಸೂಚಿಸಿದೆ. ಆದರೆ ಅಸ್ಪಷ್ಟವಾಗಿರುವುದರಿಂದ ಓದುವುದು ಕಷ್ಟಸಾಧ್ಯ). ಈ ಚಿತ್ರದಲ್ಲಿ ಎಡಭಾಗದಲ್ಲಿ ಗ್ರಾಮ ಪ್ರಮುಖನು ಆಸನವೊಂದರ ಮೇಲೆ ಕುಳಿತಿದ್ದಾನೆ. ಅವನಿಗೆ ಕಾಣಿಕೆ ನೀಡುತ್ತ ನಮಸ್ಕಾರ ಮಾಡುತ್ತಿರುವ ಮತ್ತೊಂದು ಆಕೃತಿ ಇದೆ. ಇವೆರಡು ಆಕೃತಿಗಳ ಎರಡೂ ಪಾರ್ಶ್ವದಲ್ಲಿ ಉದ್ದನೆಯ ಕರಿವರ್ಣದ ಕೋಟಿನಂತಹ ಅಂಗಿ ಹಾಕಿದ, ರುಮಾಲು ಸುತ್ತಿದ ಪರಿಚಾರಕರ ಆಕೃತಿಗಳಿವೆ. ಇದೇ ಹಂತದ ಪಕ್ಕದ ಅವಕಾಶದಲ್ಲಿ ಮೂವರು ವ್ಯಕ್ತಿಗಳು ಒಂದೇ ಆಸನದ ಮೇಲೆ ಕುಳಿತಂತೆ ತೋರಿಸಲಾಗಿದೆ. ಮತ್ತೊಂದು ಚಿತ್ರದಲ್ಲಿ ಬ್ರಿಟಿಷ್ ಅಧಿಕಾರಿಗಳ ದುರಾಡಳಿತವನ್ನು ಚಿತ್ರಿಸಿದೆ. ಇದರಲ್ಲಿ ಇಬ್ಬರು ಸ್ಥಳೀಯ ಅಧಿಕಾರಿಗಳು ಕುಳಿತಿದ್ದು ಅವರ ಮುಂದೆ ಸ್ಥಳೀಯ ಗೌಡ ಅಥವಾ ಮುಖ್ಯಸ್ಥ ಕಾಗದವೊಂದನ್ನು ಅವರಿಗೆ ತೋರಿಸುತ್ತಿದ್ದಾನೆ. ಮತ್ತೊಂದೆಡೆಗೆ ಇಬ್ಬರು ಸಿಪಾಯಿಗಳು ವ್ಯಕ್ತಿಯೋರ್ವನಿಗೆ ಶಿಕ್ಷೆ ನೀಡುತ್ತಿದ್ದಾರೆ. ಅವರ ಹಿಂಬದಿಯಲ್ಲಿ ಮುದುಕ ಮತ್ತು ಮುದುಕಿಯರ ಆಕೃತಿಗಳಿವೆ. ಈ ಚಿತ್ರದ ಒಟ್ಟಾರೆ ಸಂಯೋಜನೆಯು ಅಂದಿನ ಬ್ರಿಟಿಶ್ ಸರ್ಕಾರದ, ಅಧಿಕಾರಿಗಳ ದೌರ್ಜನ್ಯವನ್ನು ಕುರಿತು ತೋರಿಸುವುದೇ ಆಗಿದೆ.

ದೇವಿ, ವೇಣುಗೋಪಾಲ, ಸರಸ್ವತಿ ಮತ್ತು ಗಣಪತಿಯರ ಚಿತ್ರಗಳು ಇಲ್ಲಿ ಕಂಡುಬರುತ್ತವೆ. ದೇವಿಯು ಕಮಲದ ಮೇಲೆ ದಶಹಸ್ತಗಳಾಗಿ ಕುಳಿತಿದ್ದಾಳೆ. ಚತುರ್ಬಾಹು ಹಸ್ತನಾದ ಕೃಷ್ಣನು ವೇಣುಗೋಪಾಲನಾಗಿದ್ದಾನೆ. ವೀಣಾಪಾಣಿಸರಸ್ವತಿ ನುಡಿಸುತ್ತಿರುವ ವೀಣೆಯ ಇಂಪಾದ ನಿನಾದವನ್ನು ಆಸ್ವಾದಿಸುತ್ತಿರುವ ತೆರದಲ್ಲಿ ಗಣೀಶನು ಕುಳಿತಿದ್ದಾನೆ. ಈ ಚಿತ್ರಗಳಲ್ಲಿ ಆಂತರಿಕ ಸಂಬಂಧ ಹಾಗೂ ಕಲಾವಿದನ ನೈಜವಾದ ರಚನಾ ಕ್ರಿಯಾತ್ಮಕತೆ ವಿಶಿಷ್ಟವಾಗಿ ಮೂಡಿಬಂದಿದೆ.
ಉದ್ದನೆಯ ಪಟ್ಟಿಕೆಯ ಮೇಲೆ ರಚನೆಗೊಂಡಿರುವ ಇದು ಬಹು ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದೆ. ಈ ಚಿತ್ರದಲ್ಲಿ ಶಿವಪುರಾಣದಲ್ಲಿ ಉಲ್ಲೇಖಿತ ವಿವರಗಳನ್ನು ನೈಜವಾಗಿ ಕಲಾವಿದ ದೃಶ್ಯಮಾಧ್ಯಮಕ್ಕೆ ತಂದಿದ್ದಾನೆ. ಇಲ್ಲಿ ಮನ್ಮಥ ವಿಜಯಕ್ಕೆ ಸಂಬಂಧಿಸಿದ ಚಿತ್ರಣವಿದೆ.
ಚಿತ್ರದ ಎಡಭಾಗದಲ್ಲಿ ಶ್ವೇತವರ್ಣಧಾರಿ ಶಿವನು ಚತುರ್ಭುಜ ಹಸ್ತನಾಗಿ ಪದ್ಮಾಸನದಲ್ಲಿ ಕುಳಿತು, ಕೈಯಲ್ಲಿ ಅಕ್ಷಮಾಲೆ ಹಿಡಿದು ತಪದಲ್ಲಿ ನಿರತನಾಗಿದ್ದಾನೆ. ಶಿವನು ಕುಳಿತ ಸ್ಥಳವನ್ನು ಹೇಮಕೂಟ ಎಂದು ಹೆಸರಿಸಿದೆ. ಶಿವನ ತಲೆಯಿಂದ ಗಂಗೋಧ್ಬವವೂ ಆಗಿದೆ. ಹೇಮಕೂಟವನ್ನು ತಪೋಧನರ ಚಿತ್ರಗಳಿಂದ ಬಿಂಬಿಸಲಾಗಿದೆ. ಇತ್ತ ಇನ್ನೊಂದೆಡೆಯಲ್ಲಿ ಕಬ್ಬಿನ ಜಲ್ಲೆಯ ಬಿಲ್ಲನ್ನು ಹಿಡಿದು ಹೂಬಾಣವನ್ನು ಬಿಡಲು ಸನ್ನದ್ಧನಾದ ಕಾಮದೇವನನ್ನು ತೋರಿಸಿದೆ. ಅವನು ತನ್ನ ಶುಕವಾಹನದ ವಾಯುಸಾರಥಿಯಾದ ರಥದ ಮೇಲೆ ಕುಳಿತಿದ್ದಾನೆ. ಕುಳಿತ ರೀತಿ ವಿಶಿಷ್ಟವಾಗಿ ಗಮನ ಸೆಳೆಯುತ್ತದೆ. ಕುಳಿತ ಶೈಲಿಯು ಆಲಿಧ ಮುದ್ರೆಯನ್ನು ಬಿಂಬಿಸುತ್ತದೆ. ಚಿತ್ರದಲ್ಲಿ ಅರ್ಧ ಮಡಿಚಿದ ಕಾಲು, ಮುಂದೆ ಮಡಿಚಿ ಇಟ್ಟು ಕಾಲುಗಳು ಸ್ಪಷ್ಟವಾಗಿ ಯುದ್ಧ ಸನ್ನದ್ಧತೆಯನ್ನು ತೋರಿಸಿದ್ದರೂ, ಮಂದಸ್ಮಿತವಾದ ಮುಖದ ಭಾವ ವಿಶಿಷ್ಟವಾಗಿ ಮೂಡಿದೆ. ಹೂ ಬಾಣ ಹೊಡೆಯುವಂತೆ ಕೈಸನ್ನೆಯಿಂದ ತೋರಿಸುತ್ತಿರುವ ಚಂದ್ರನ ಆಕೃತಿಯೂ ಇಲ್ಲಿ ಗಮನ ಸೆಳೆಯುತ್ತದೆ. ಶಿವನ ಬಲ ಪಾರ್ಶ್ವದಲ್ಲಿ ಭವಾನಿ (ದೇವಿ-ಗಿರಿಜಾ) ಆಕರ್ಷಕ ಭಂಗಿಯಲ್ಲಿ ನಿಂತಿದ್ದಾಳೆ. ಇಲ್ಲಿ ಅವಳು ನಿಂತ ಭಂಗಿ ನೃತ್ಯ ಭಂಗಿಯಂತಿದೆ. ಶಿವನು ಅವಳ ಕಡೆ ನೋಡದೇ ತನ್ನ ತಪದಲ್ಲಿ ಮಗ್ನನಾಗಿದ್ದಾನೆ. ಇಲ್ಲಿನ ಆಕೃತಿಗಳ ಅಂತರಿಕ ಸಂಬಂಧಾರ್ಥಗಳನ್ನು ನೋಡಿದಾಗ, ಮನ್ಮಥನ ಹೂಬಾಣ ಶಿವನಿಗೆ ನಾಟಿದಾಕ್ಷಣ ಅವನ ಮನದಲ್ಲಿ ಶೃಂಗಾರ ಭಾವನೆ ಉತ್ಪನ್ನವಾದಾಗ ಅವನ ಎದುರಿನಲ್ಲಿ ಅವನಿಗಾಗಿ ಕಾಯುತ್ತಿರುವ ದೇವಿಯನ್ನು ಕಲಾವಿದನು ಭವಾನಿಯಾಗಿ ಚಿತ್ರಿಸಿದ್ದಾನೆ. ಈ ವಿವರಣೆ ಮೂಲದಲ್ಲಿ ಇಲ್ಲದಿದ್ದೠ, ಕಲಾವಿದ ತನ್ನದೇ ಪರಿಕಲ್ಪನೆಯಲ್ಲಿ ಬಹು ಅರ್ಥವತ್ತಾಗಿ ಒಂದೊಂದು ಘಟನೆಗೂ ಪೂರಕವಾಗಿ ಚಿತ್ರ ರಚನೆ ಮಾಡಿದ್ದಾನೆ. ಸಾಮಾನ್ಯವಾಗಿ ಮನ್ಮಥ ವಿಜಯದ ಚಿತ್ರಗಳು ಶಿಲ್ಪಗಳಲ್ಲಿ ರತಿಮನ್ಮಥ ಶಿಲ್ಪಗಳ ರೂಪಗಳಾಗಿ ಕಂಡುಬರುತ್ತವೆ.೧೦ ಚಿತ್ರಗಳಲ್ಲಿ ಇಂತಹ ಉದಾಹರಣೆಗಳು ಬಹು ಅಪರೂಪವೆಂದೇ ಹೇಳಬಹುದು.

ಮನ್ಮಥ ವಿಜಯದ ಚಿತ್ರದಂತೆ, ದಕ್ಷಯಜ್ಞದ ಚಿತ್ರ ಕೂಡ ಬಹು ವಿಶಿಷ್ಟವಾಗಿ ದೃಶ್ಯನಿರೂಪಣೆ ಹೊಂದಿದೆ. ಈ ಚಿತ್ರದಲ್ಲಿ ಎರಡು ಪ್ರಮುಖ ಘಟನೆಗಳು ರಚನೆಯಾಗಿವೆ. ಒಂದು ಭಾಗದಲ್ಲಿ ಶಿವನ ಮತ್ತು ವೀರಭದ್ರರ ಆಕೃತಿಗಳಿದ್ದರೆ ಮತ್ತೊಂದೆಡೆ ದಕ್ಷಬ್ರಹ್ಮನು ವಿಷ್ಣುವಿನ ಉಪಸ್ಥಿತಿಯಲ್ಲಿ ಯಜ್ಞವನ್ನು ನಡೆಸುತ್ತಿರುವ ಚಿತ್ರಣವಿದೆ. ಗಿರಿಜೆಯು ಯಜ್ಞಕ್ಕೆ ಶಿವನನ್ನು ಆಹ್ವಾನಿಸದೇ ಇರುವ ಕುರಿತು ಮತ್ತು ಅವಳಿಗಾದ ಅಗೌರವ ಕುರಿತು ದಕ್ಷನೆದುರೆ ಹೇಳುತ್ತಿರುವಂತೆ ಅವಳ ಕೈ ಸಂಜ್ಞೆಯ ದೃಶ್ಯಣವಿದೆ. ಬ್ರಹ್ಮಮತ್ತು ವಿಷ್ಣುಗಳು ಎದ್ದು ನಿಂತು ಗಿರಿಜೆಯ ಮಾತುಗಳಿಂದ ಆಶ್ಚರ್ಯರಾದಂತೆಯೂ ದಕ್ಷಬ್ರಹ್ಮನಿಗೆ ಇದಾವುದರ ಪರಿವೇ ಇಲ್ಲದೇ ಯಜ್ಞದಲ್ಲಿ ಭಾಗಿಯಾಗಿರುವಂತೆಯೂ ತೋರಿದೆ. ಈ ಸನ್ನಿವೇಶ ಅತ್ಯಂತ ನೈಜವಾಗಿ ದೃಶ್ಯನಾಟಕದ ರೂಪದಲ್ಲಿ ಚಿತ್ರಣಗೊಂಡಿದೆ. ಕಲಾವಿದನು ಆ ಸನ್ನಿವೇಶವನ್ನು ಮತ್ತೂ ನೈಜವಾಗಿ ತೋರಿಸಿದ್ದಾನೆ.

ಕುರುಕ್ಷೇತ್ರದ ಚಿತ್ರಣದಲ್ಲಿ ಹನುಮಧ್ವಜದ ಪಥದಲ್ಲಿ ಕೃಷ್ಣಸಾರಥಿಯಾದ ಅರ್ಜುನನು ರಥದಲ್ಲಿ ಕುಳಿತು ಯುದ್ಧ ಮಾಡುತ್ತಿದ್ದಾನೆ. ಅವನಿಗೆ ಎದುರಾಗಿ ದುರ್ಯೋಧನನೂ ರಥದಲ್ಲಿ ಕುಳಿತು ಯುದ್ಧ ಮಾಡುತ್ತಿದ್ದಾನೆ. ಇಲ್ಲಿ ಆಕೃತಿಗಳ ನಿರೂಪಣೆ ಹಾಗೂ ಸನ್ನಿವೇಶದ ಚಿತ್ರಣಗಳು ಪೂರಕವಾಗಿ ರಚನೆಯಾಗಿವೆ. ಇಂತಹದೇ ದೃಶ್ಯಗಳನ್ನು ಕಿನ್ನಾಳದ ರೇಖಾ ಚಿತ್ರಗಳಲ್ಲಿಯೂ ಕೂಡಾ ನೋಡಬಹುದಾಗಿದೆ.

ಇನ್ನೊಂದು ಚಿತ್ರದಲ್ಲಿ ಶಿವನು ತ್ರಿಪುರಾಸುರನನ್ನು ಸಂಹರಿಸಲು ರಥವನ್ನೇರಿ ಯುದ್ಧದಲ್ಲಿ ತೊಡಗಿದಂತೆ ತೋರಿಸಲಾಗಿದೆ. ಶಿವನ ರಥದ ರಚನೆ ಹಾಗೂ ತ್ರಿಪುರಾಸುರನನ್ನು ಕಲಾವಿದ ಚಿತ್ರಿಸಿದ ರೀತಿ ವಿಶಿಷ್ಟವಾಗಿದೆ ಮತ್ತು ಕಥಾನಿರೂಪಣೆಗೆ ಪೂರಕವಾಗಿದೆ. Wಪುರ ಸಂಹಾರದ ಕಥನವು ಮಹಾಭಾರಥದ ಶಲ್ಯ ಪರ್ವದಲ್ಲಿ ಬಿಂಬಿತವಾಗಿದೆ. ಈ ಕಥನವು ಆ ಕಾಲದಲ್ಲಿ ಜನಪ್ರೀಯವಾಗಿತ್ತು. ಶಿಲ್ಪಗಳಲ್ಲೂ ಕೂಡಾ ಈ ದೃಶ್ಯವು ಹಲವಾರು ಕಡೆಗಳಲ್ಲಿ ರಚನೆಯಾಗಿದ್ದು ಈ ನಿರೂಪಣಾ ವಿಷಯದ ಜನಪ್ರಿಯತೆಯನ್ನು ಸೂಚಿಸುತ್ತದೆ.

ಚಿತ್ರಣದಲ್ಲಿ ಮೂಲ ಕಥನದಲ್ಲಿ ಉಲ್ಲೇಖಗೊಂಡ ರೀತಿಯಲ್ಲಿಯೇ ಈ ಕಥನವು ರಚನೆಯಾಗಿದೆ. ಶಿವನ ರಥವು ಸರ್ಪಗಳಿಂದ ಆಗಿದ್ದು ಸೂರ್ಯ-ಚಂದ್ರರೇ ಗಾಲಿಗಳಾಗಿದ್ದಾರೆ. ಚರ್ತುಮುಖ ಬ್ರಹ್ಮನೇ ರಥದಸಾರಥಿ. ಶಿವನು ಅರ್ಧ ಕುಳಿತಂತೆ ಕುಳಿತು ತನ್ನ ಪಿನಾಕಿಯಿಂದ ಯುದ್ಧ ಮಾಡುತ್ತಿದ್ದಾನೆ. ಇತ್ತ ತ್ರಿಪುರಾಸುರರಾದ ರಾಕ್ಷಸರನ್ನು ಒಂದೊಂದು ವೃತ್ತಗಳಲ್ಲಿ ತೋರಿಸಿದೆ. ಸಾಂಕೇತಿಕವಾಗಿ ಈ ವೃತ್ತಗಳು ಅವರವರ ನಗರಗಳನ್ನು ಸೂಚಿಸುತ್ತವೆ. ಈ ರೀತಿಯ ದೃಶ್ಯ ಸಂಯೋಜನೆ ತುಸು ವಿಭಿನ್ನವಾಗಿ ಹಂಪಿ ವಿರೂಪಾಕ್ಷ ದೇವಾಲಯದ ಮಹಾರಂಗಮಂಟಪದ ಒಳಮಾಳಿಗೆಯ ಭಿತ್ತಿಯಲ್ಲಿ ರಚನೆಗೊಂಡಿದೆ. ಅದೇ ರೀತಿ, ಶಿಲ್ಪಗಳಲ್ಲಿ ಹೊಯ್ಸಳ ಶಿಲ್ಪಕಲೆಯಲ್ಲಿ ವಿಶೇಷವಾಗಿ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ, ನುಗ್ಗೆಹಳ್ಳಿಯ ನರಸಿಂಹ ದೇವಾಲಯಗಳಲ್ಲಿ ಅಧಿಷ್ಠಾನದ ಕಥಾನಕ ಶಿಲ್ಪ ಪಟ್ಟಿಕೆಗಳ ಮೇಲೆ ರಚನೆಯಾಗಿವೆ. ಈ ಹಿನ್ನೆಲೆಯನ್ನು ನೋಡಿದರೆ ದೃಶ್ಯಾಂಶಗಳು ಕಾಲಗಳಿಂದ ಕಾಲಕ್ಕೆ ಮುಂದುವರಿದುಕೊಂಡು ಹೋಗುವುದನ್ನು ಕಲಾವಿದರು ತಮ್ಮ ಸೂಕ್ಷ್ಮ ಸಂವೇದನೆಗಳಿಂದ ಅವುಗಳನ್ನು ದುಡಿಸಿಕೊಳ್ಳುವುದು ಇಲ್ಲಿ ಸ್ಪಷ್ಟವಾಗುತ್ತದೆ.೧೧

ಇನ್ನು ಕೊನೆಯದಾಗಿ ಈ ಮೊದಲೇ ಹೇಳಿದಂತೆ ಇಲ್ಲಿ ಚಿತ್ರಗಳನ್ನು ಹೊರಮೊಗಸಾಲೆಯ ತಗಡಿನ ಸಜ್ಜಾದ ಕೆಳಗಡೆಯೂ ರಚಿಸಿದೆ. ಈ ಚಿತ್ರಗಳು ಬಹುತೇಕ ಮಾಸಿಹೋಗಿದ್ದು ಅವಸಾನದ ಅಂಚಿನಲ್ಲಿವೆ. ಕಾಳಿಂಗಮರ್ದನ ಕೃಷ್ಣ, ಗಂಗಾಧರ ಶಿವ, ಕೃಷ್ಣನು ಗೋಪಿಕಾ ವಸ್ತ್ರಾಪಹರಣ ಮಾಡುವುದು, ಮಾರ್ಕಂಡೇಯ ವಿಜಯ, ಮಹಿಷಮರ್ಧಿನಿ ಇತ್ಯಾದಿ ವಿಷಯಗಳ ಚಿತ್ರಗಳು ನಿರೂಪಣೆ ಆಡಿವೆ, ಈ ಎಲ್ಲ ಚಿತ್ರಗಳು ಬಹುತೇಕ ಮಾಸಿದ್ದರೂ, ಅವುಗಳ ವಿನ್ಯಾಸ, ಆಕಾರಗಳು ಸ್ಪಷ್ಟವಾಗಿವೆ. ಹೀಗಾಗಿ ಇವುಗಳ ಗುರುತಿಸುವಿಕೆ ಸಾಧ್ಯವಾಗುತ್ತದೆ.

ಅಮ್ಮಿನಭಾವಿಯ ಶಾಂತೇಶ್ವರ ಮಠದ ಚಿತ್ರಗಳು ಉತ್ತರ ಕರ್ನಾಟಕದ ಭಿತ್ತಿ ಚಿತ್ರ ಪರಂಪರೆಗೆ ಪೂರಕವಾಗಿಯೇ ಬೆಳೆದಿವೆ. ಇವುಗಳ ರಚನೆ ಪ್ರಾಮುಖ್ಯತೆ ಅಂದಿನ ಸಮಕಾಲೀನ ಸಂವೇದನೆಗಳಿಗೆ ಪೂರಕವಾಗಿಯೇ ಇದೆ. ಅಂದಿನ ಸಾಮಾಜಿಕ ವಿವರಗಳೂ ಚಿತ್ರದಲ್ಲಿ ಬೆರೆತಿರುವುದನ್ನು ಹಿಂದೆ ನೋಡಲಾಗಿದೆ. ಶಾಂತೇಶ್ವರ ಮಠ ಮೂಲತಃ ವೀರಶೈವ ಮಠವಾದರೂ ಇಲ್ಲಿ ವೈಷ್ಣವ-ಶೈವ ಎರಡೂ ಪಥಗಳಿಂದ, ಶಿವನ, ವಿಷ್ಣುವಿನ ವಿಭಿನ್ನ ಪ್ರಚಲಿತ ಚಿತ್ರಗಳನ್ನು ರಚಿಸಿದ್ದಾರೆ. ಅಲ್ಲದೇ ಅವುಗಳಲ್ಲಿ ಪಾರಂಪರಿಕ ಅಂಶಗಳನ್ನು ದೃಶ್ಯರೂಪಗಳಾಗಿ ಬಿಂಬಿಸಿದ್ದಾರೆ. ಈ ಚಿತ್ರಗಳ ರಚನಾ ಕಾಲದ ಬಗ್ಗೆ ನಿಖರವಾಗಿ ಹೇಳಲು ಯಾವುದೇ ಶಾಸನಾಧಾರಗಳಿಲ್ಲ. ಆದರೆ ಈ ಚಿತ್ರಗಳಲ್ಲಿರುವ ವರ್ಣವಿನ್ಯಾಸ, ಆಕೃತಿಗಳ ಹಾಗೂ ಚಿತ್ರ ರಚನಾ ಶೈಲಿಯು ಸ್ಪಷ್ಟವಾಗಿ ೧೯ ನೆಯ ಶತಮಾನದ ನಂತರದ ಕಾಲದ್ದೇ ಆಗಿದೆ. ಇಲ್ಲಿನ ಕೆಲವು ಆಕೃತಿಗಳಲ್ಲಿ ನರಗುಂದದ ಬಾಬಾಸಾಹೇಬರ ಅರಮನೆಯ ಗೋಡೆಯ ಚಿತ್ರಗಳಿಗೆ ಹೋಲಿಕೆ ಕಂಡುಬರುತ್ತವೆ. ಅಲ್ಲದೇ ಈ ಚಿತ್ರಗಳ ವರ್ಣವಿನ್ಯಾಸ ಸಮಕಾಲೀನ ಭಿತ್ತಿಚಿತ್ರಗಳ ವಿನ್ಯಾಸವನ್ನೇ ಅನುಸರಿಸುತ್ತವೆ. ವಿಶೇಷವಾಗಿ ಚಿತ್ರಗಳ ಹಿನ್ನೆಲೆಯ ವರ್ಣ ಏಕ ಪ್ರಕಾರದ್ದಿರುತ್ತದೆ. ಅಂದರೆ, ಕೆಂಪು, ಹಳದಿ, ಹಸಿರು ಅಥವಾ ನೀಲಿ ವರ್ಣಗಳನ್ನು ಚಪ್ಪಟೆಯಾಗಿ ಹಿನ್ನೆಲೆಯಲ್ಲಿ ಹಾಕಲಾಗಿದೆ. ಅದರ ಮೇಲೆ ಉದ್ದೇಶಿತ ಆಕೃತಿಗಳು ರಚನೆಗೊಳ್ಳುತ್ತವೆ. ಅಲ್ಲದೇ ಆಕೃತಿಗಳ ಬಾಹ್ಯ ರೇಖೆಗಳು ತುಂಬಾ ನಾಜೂಕಾಗಿ ಖಂಡರಿಸಿದಂತೆ ಕಂಡುಬರುತ್ತವೆ. ವರ್ಣಸಂಯೋಜನೆಯಲ್ಲಿಯೂ ಕಲಾವಿದನ ಜಾಣ್ಮೆಯನ್ನು ಕಾಣಬಹುದು. ಸಮಯೋಚಿತವಾಗಿ ವರ್ಣನೆಗಳನ್ನು ವಿನ್ಯಾಸಗೊಳಿಸಿದೆ. ಒಟ್ಟಾರೆಯಾಗಿ ಸಂದರ್ಭಕ್ಕೆ ಅನುರೂಪವಾಗಿ ಚಿತ್ರ-ವರ್ಣಸಂಯೋಜನೆ ಇರುತ್ತಿತ್ತು. ಈ ಹಿನ್ನೆಲೆಯಲ್ಲಿ ಮೈಸೂರು ಸಂಪ್ರದಾಯದ ಭಿತ್ತಿ ಚಿತ್ರಗಳನ್ನು ಕೂಡ ನೋಡಬಹುದು. ಒಟ್ಟಾರೆಯಾಗಿ ೧೮೦೦ರ ನಂತರದಲ್ಲಿ ಬಹುತೇಕ ಒಂದೇ ತೆರನಾದ ಚಿತ್ರ ರಚನಾ ಸಂವೇದನೆಗಳು ಇದ್ದವು ಎಂದು ಹೇಳಬಹುದು. ಹೀಗಾಗಿ ಪ್ರಸ್ತುತ ಚಿತ್ರಗಳನ್ನು ಕ್ರಿ.ಶ. ೧೮೫೦ರ ನಂತರದ ಕಾಲಕ್ಕೆ ಸೇರಿಸಬಹುದು.

ಅಮ್ಮಿನಭಾವಿಯ ಚಿತ್ರಗಳು ೧೯ನೇ ಶತಮಾನದ ಚಿತ್ರಕಲೆಯ ಮುಖ್ಯವಾಹಿನಿಯಲ್ಲಿ ಇದ್ದವುಗಳಾಗಿವೆ. ಕಲಾವಿದರ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಹೀಗಾಗಿ ಪುನಃ ಕಲಾವಿದ ಇಲ್ಲಿ ಅನಾಮಿಕನಾಗಿ ಬಿಟ್ಟಿದ್ದಾನೆ. ಆದರೆ. ಪೌರಾಣಿಕ ಕಥನಗಳ ದೃಶ್ಯ ಪರಿಕಲ್ಪನೆ, ಶಿಷ್ಟವಾದ ಮತ್ತು ಪ್ರೌಢ ಚಿತ್ರ ಸಂಪ್ರದಾಯದ ಇರುವಿಕೆಯನ್ನು ದೃಢಪಡಿಸುತ್ತದೆ.

ಅಡಿ ಟಿಪ್ಪಣಿಗಳು
೧. ಅಮ್ಮಿನಭಾವಿ – ಒಂದು ಅಗ್ರಹಾರವಾಗಿತ್ತು. ಇದಕ್ಕೆ ಶಾಸನೋಕ್ತ ದಾಖಲೆಗಳಿವೆ.
೨. ಶಿವರಾಮ ಕಾರಂತ, ೧೯೭೨, ಕರ್ನಾಟಕ ಪೇಂಟಿಂಗ್ಸ್, ಮೈಸೂರು.
೩. ಬಡಿಗೇರ ಎನ್ನುವ ವಿದ್ಯಾರ್ಥಿ ಒಂದು ಪ್ರೌಢ ಪ್ರಬಂದ ರಚಿಸಿದ್ದರೂ ಅದರಲ್ಲಿ ಕೇವಲ ಚಿತ್ರಗಳ ವಿವರಣೆ ಇದೆ. (ಹಂಪಿ ವಿಶ್ವವಿದ್ಯಾಲಯ)
೪. ಇಂತಹದೇ ಪ್ರಾಚೀನ ಮನೆಗಳ ಉದಾಹರಣೆಗಳು ಬೆಳಗಾಂವ ಜಿಲ್ಲೆಯ ಶಿರಸಂಗಿಯ ’ವಾಡೆ”, ನರಗುಂದದ ಬಾಬಾಸಾಹೇಬರ ಅರಮನೆ (ನಗರಸಭೆ ಕಟ್ಟಡ) ಹಾಗೂ ರಾಮದುರ್ಗದ ರಾಜವಾಡೆಗಳು ಆ ಕಾಲದಲ್ಲಿಯೀ ನಿರ್ಮಾಣಗೊಂಡಿವೆ.
೫. ಚಿತ್ರರಚನೆಗೆ ’ಸಜ್ಜಾ’ದ ಭಾಗವನ್ನು ಆಶ್ರಯಿಸಿರುವುದು ಆ ಕಾಲದ್ದೇ ಅಲ್ಲ. ಅಜಂತಾ, ಬಾದಾಮಿ ಲಯಣಗಳಲ್ಲಿಯೂ ಒಳಮಾಳಿಗೆಯ ಹೊರಚಾಚಿದ ಭಾಗವಾಗಿರುವ ಸಜ್ಜಾದ ಮೇಲೆ ಚಿತ್ರಗಳು ಕಂಡಿಬರುತ್ತವೆ. ಅಂತೆಯೇ ಈ ಪದ್ಧತಿ ಅಂದಿನಿಂದಲೇ ಬೆಳೆದಿದೆ. ನರಗುಂದದ ಶ್ರೀ ಹಸಿಬಿಯವರ ಮನೆಯ ಹೊರಭಾಗದ ಸಜ್ಜಾದ ಮೇಲೆಯೂ ಅಮ್ಮಿನಭಾವಿಯ ರೀತಿಯಲ್ಲೇ ಚಿತ್ರಗಳಿರುವುದನ್ನು ಗಮನಿಸಬಹುದು.
೬. ೧೮-೧೯ನೇ ಶತಮಾನದ ಚಿತ್ರಗಳು ಬಹುತೇಕವಾಗಿ ಮರದ ಹಲಗೆಯ ಹಿನ್ನೆಲೆಯಲ್ಲಿಯೇ ರಚನೆಗೊಂಡಿವೆ. ಮೈಸೂರು ಪ್ರಾಂತ್ಯದಲ್ಲಿ ಅಂತಹ ಉದಾಹರಣೆಗಳು ವಿರಳ. ಆದರೂ ಮೈಸೂರಿನ ಪ್ರಸನ್ನ ವೆಂಕಟೇಶ್ವರ ದೇವಾಲಯದ “ಚಿತ್ರಮಂಟಪ”ದ ಉದಾಹರಣೆ ನೀಡಬಹುದು. ಧಾರವಾಡದ ಹತ್ತಿರದ ಹಳ್ಯಾಳ ತಾಲೂಕು ಕೇಂದ್ರದಿಂದ ಕೆಲವೇ ಕಿ,ಮೀ. ದೂರದಲ್ಲಿರುವ ಬಿ.ಕೆ.ಹಳ್ಳಿಯ ರಾಮಮಂದಿರದ ಭಿತ್ತಿ ಚಿತ್ರಗಳು ಕೂಡ ಮರದ ಹಲಗೆಯ ಮೇಲೆಯೇ ರಚನೆಗೊಂಡಿವೆ.
೭. ಸಂಯೋಜಿತ ಪ್ರಾಣಿಯ ರೂಪದಲ್ಲಿ ಆಕೃತಿಗಳನ್ನು ತೋರಿಸುವುದು ಪ್ರಾಚೀನ ಶಿಲ್ಪ್ಪಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಪ್ರಸ್ತುತ ಚಿತ್ರ ’ಶರಭ’ದ ಚಿತ್ರಕ್ಕೆ ಸಮಾನಾಂತರವಾಗಿದ್ದರೂ ಸ್ಪಷ್ಟವಾಗಿ ಯಾವ ವಿಷಯವೂ ಈ ಕುರಿತು ತಿಳಿಯುವುದಿಲ್ಲ.
೮. ಈ ರೀತಿಯ ಚಿತ್ರಣದಲ್ಲಿ ಕಲಾವಿದನೇ ತನ್ನದೇ ಆದ ರೀತಿಯಲ್ಲಿ ಸಂಯೋಜನೆಯನ್ನು ಕೈಗೊಳ್ಳುತ್ತಾನೆ.
೯. ಪಂಚಮುಖ ಶಿವನ ದೃಶ್ಯಣದಲ್ಲಿ ಪ್ರತಿಮಾ ಶಾಸ್ತ್ರದ ದೃಷ್ಟಿಯಲ್ಲಿ ಅದು ಮಹೇಶಮೂರ್ತಿಯ ಆಕೃತಿಯಾಗುತ್ತದೆ. ಉದಾಹರಣೆಗೆ ಎಲಿಫೆಂಟಾ ಲಯಣದ ಮಹೇಶಮೂರ್ತಿ ಹಾಗೂ ಪಂಚಮುಖ ಶಿವರ ಆಕೃತಿಗಳು ಶಿಲ್ಪಗಳ ಉದಾಹರಣೆಗಳಲ್ಲಿ ದೊರೆಯುತ್ತವೆ. ಆದರೆ ಚಿತ್ರಗಳಲ್ಲಿ ಅಂತಹ ಉದಾಹರಣೆಗಳು ತೀರ ಅಪರೂಪವೆಂದೇ ಹೇಳಬಹುದು.
೧೦. ರತಿ ಮನ್ಮಥನ ಶಿಲ್ಪಗಳು ಹೊಯ್ಸಳ ದೇವಾಲಯಗಳ ಭಿತ್ತಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ. ಚಾಲುಕ್ಯರ ಬಾದಾಮಿಯ ೩ನೇ ಲಯಣದಲ್ಲೂ ರತಿ-ಮನ್ಮಥನ ಶಿಲ್ಪವಿದೆ. ಆದರೆ ಈ ರೀತಿಯ ಕಥಾ ನಿರೂಪಣಾ ಶಿಲ್ಪದ ರೂಪದಲ್ಲಿ ಕಂಡುಬರುವುದು ಅಪರೂಪವೆಂದೇ ಹೇಳಬಹುದು. ಕಿನ್ನಾಳ ರೇಖಾಚಿತ್ರಗಳಲ್ಲಿ ಮನ್ಮಥನ ಇಂತಹದೇ ಚಿತ್ರ ನಿರೂಪಣೆ ಇದೆ.
೧೧. ತ್ರಿಪುರಾಂತಕ ಶಿವನ ಕಥಾ ನಿರೂಪಣಾ ಶಿಲ್ಪವು ಹೊಯ್ಸಳರ ಕಾಲದಲ್ಲಿನ ದೇವಾಲಯಗಳಲ್ಲಿ ಕಥಾನಕ ಪಟ್ಟಿಕೆಗಳ ಸಾಂಕೇತಿಕವಾಗಿ ಚಿತ್ರಿಸುವ ಪ್ರಯತ್ನವನ್ನು ನೋಡಬಹುದು. ಅದೇ ರೀತಿ ಹಂಪೆ ವಿರೂಪಾಕ್ಷ ದೇವಾಲಯದ ಮಹಾಮಂಟಪದ ಒಳಮಾಳಿಗೆಯ ಭಿತ್ತಿಯಲ್ಲಿ ಈ ರೀತಿಯಲ್ಲಿಯೇ ಚಿತ್ರ ರಚನೆಯು ಕಂಡು ಬರುತ್ತದೆ.

(ಸಂಪಾದಕರು ಡಾ. ಆರ್. ಗೋಪಾಲ್
ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ
ಅರಮನೆ ಆವರಣ, ಮೈಸೂರು – ೫೭೦ ೦೦೧-೨೦೦೮)(ಸಂಪಾದಕರು ಡಾ. ಆರ್. ಗೋಪಾಲ್
ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ
ಅರಮನೆ ಆವರಣ, ಮೈಸೂರು – ೫೭೦ ೦೦೧-೨೦೦೮)

Leave a comment

This site uses Akismet to reduce spam. Learn how your comment data is processed.