ಕರ್ನಾಟಕದಲ್ಲಿ ಸಮಕಾಲೀನ ದೃಶ್ಯಸಂಸ್ಕೃತಿಯ ಗ್ರಹಿಕೆಗೊಂದು ತಾತ್ವಿಕ ಹಿನ್ನೆಲೆ : ಎಚ್.ಎ. ಅನಿಲ್ ಕುಮಾರ್ .ಭಾಗ-೧

ಕರ್ನಾಟಕದಲ್ಲಿ ಸಮಕಾಲೀನ ದೃಶ್ಯಸಂಸ್ಕೃತಿಯ ಗ್ರಹಿಕೆಗೊಂದು ತಾತ್ವಿಕ ಹಿನ್ನೆಲೆ
(ವಸ್ತು, ವಾಸ್ತವ ಮತ್ತು ವಾಸ್ತವ್ಯ):

(೧) ’ವಸ್ತು’ವೆಂಬ ಬೆನ್ನೆರಿದ ’ಭೂತ’

ಯಾವುದೇ ಭೌತಿಕ ವಸ್ತುವಿಗೆ ‘ಪಾತ್ರ’ ಮತ್ತು ‘ಕೆಲಸ’ವೊಂದನ್ನು ಆರೋಪಿಸಿದರೆ ಆ ವಸ್ತು ‘ನಾಗರೀಕತೆ’ಯ ಪದಕೋಶದೊಳಕ್ಕೆ ಸೇರುತ್ತದೆ. ಇಂದಿಗೂ ನಮಗೆ ಗುರ್ತಿಲ್ಲದ, ಪರಿಚಯವಾಗದಿರುವ ವಸ್ತುಗಳ ಸಮೂಹವನವನ್ನೇ ‘ದಟ್ಟಕಾಡು’ ಅಥವ ’ಆಕಾಶಕಾಯಗಳು’ ಎಂದು (ಉದಾಹರಣೆಗೆ) ’ಕರೆಯುವುದು’ ಮತ್ತು ಭಾವಿಸುವುದು. ಈ ಎರಡು ಹೆಸರುಗಳೂ ಸಹ ನಾಗರೀಕತೆಯ ಚೌಕಟ್ಟಿನ ’ಒಳಗಿನಿಂದಲೇ’ ಹುಟ್ಟಿಕೊಂಡಿರುವುದರಿಂದ, ನಾಗರೀಕರೇ ಜಗತ್ತಿನ ಎಲ್ಲ ವಸ್ತುಗಳ ನಾಮಕರಣದ ಹಕ್ಕು ಹೊಂದಿರುವುದರಿಂದ, ನಾಗರೀಕತೆಯ ಹೊರಗುಳಿದಿರಬಹುದಾದ ವಸ್ತುಗಳಿಗೆ ಇನ್ನೂ ನಾಮಕರಣವಾಗಿಲ್ಲ ಎಂಬುದೂ ಸತ್ಯ!

‘ಪಾತ್ರ’ ಮತ್ತು ‘ಕಾರ್ಯ’ವೇ ನಿರ್ಧಾರವಾಗದ, ಇನ್ನೂ ಹೆಸರಿಸಿರದ ವಸ್ತುವಿನ-ಅಂತಹವು ಇದ್ದ ಪಕ್ಷದಲ್ಲಿ–ನಡವಳಿಕೆಯನ್ನು ‘ನಿಗೂಢ’ವೆಂದು ಕರೆಯುತ್ತೇವೆ. ನಮ್ಮ ಅರ್ಥದಲ್ಲಿ ಮನವ-ನಿರ್ಮಿತ ವಸ್ತುಗಳು ಹೆಚ್ಚು ಪರಿಪೂರ್ಣ; ನೈಸರ್ಗಿಕವಾದವುಗಳು ವಸ್ತುಗಳೇ ಅಲ್ಲ ಏಕೆಂದರೆ ಮೊದಲನೆಯದಕ್ಕೆ ಎರಡನೆಂiiದ್ದು ಕಚ್ಚಾಸಾಮಗ್ರಿಯಷ್ಟೇ. ಇದು ಹೆಚ್ಚೂಕಡಿಮೆ ಕಳೆದ ಐನೂರು ವರ್ಷಗಳ ಕೊಳ್ಳುಬಾಕ ಸಂಸ್ಕೃತಿಯ (ಕನ್‌ಸ್ಯೂಮರಿಸ್ಟ್ ಸೊಸೈಟಿ) ಮನೋಭಾವ. ಆದರ್ಶೀಕೃತ ಸಮಾಜದಲ್ಲಿ ಮಾನವ-ನಿರ್ಮಿತವಲ್ಲದ ವಸ್ತುಗಳೆಂದರೆ ಪಂಚಭೂತಗಳು. ಇದನ್ನು ತಿರುವು ಮರುವು ಮಾಡಬಹುದಾದರೆ-ಈ ಕ್ರಿಯೆಯೇ ತಿರುವು ಮರುವು, ಅಥವ ಪಿತೃ ಪುತ್ರನ ಹಾಗಿದ್ದಾನೆಂದು ಭಾವಿಸುವ ರೀತಿಯಿದು–ಭೂತಗಳ ಮಾನವೀಕರಣವನ್ನು ವಸ್ತುಗಳು ಎನ್ನಬಹುದಾಗಿದೆ. ಅಸಂಸ್ಕರಿತ ವಸ್ತುವೆ ಭೂತ (ಅದು ನೆನ್ನೆಯಾಗಿರಬಹುದು, ಪಿಶಾಚಿಯಾಗಿರಬಹುದು ಅಥವ ಭವಿಷ್ಯವಿಲ್ಲದ್ದೂ ಆಗಿರಬಹುದು).

ಹೆಸರಿರದ ವಸ್ತುಗಳ ಮುಖ್ಯ ಉದ್ದೇಶವೇ ನಿಗೂಢವಾಗಿರುವುದು.*೧* ಅರ್ಥವಾಗದಿರುವ, ಅರ್ಥವಿನ್ನೂ ದೊರಕದಿರುವ ವಸ್ತುವೇ ‘ಕಾಡು’ ಮತ್ತು ’ಆಕಾಶಕಾಯಗಳು’ ಎಂದು ಹೆಸರಿಸಿದ್ದಾಯಿತು. ಪುರಾಣ ಪುಣ್ಯಕಥೆಗಳಲ್ಲಿ ವಸ್ತುವಾಗಿದ್ದರೂ ನಿರ್ದಿಷ್ಟ ಹೆಸರಿರದವುಗಳು (ಗಾಳಿ, ರಾವು, ಗಂಧರ್ವರು), ಹೆಸರಿದ್ದೂ ವಸ್ತುವಾಗದವುಗಳು (ಆತ್ಮ) ಕಾಡಿನಲ್ಲೇ ಅಡಗಿಕೊಳ್ಳುವಂತಹವು. ಅಂದರೆ ನಾಗರೀಕತೆಯು ವಸ್ತುಗಳಿಗೆ ಎರಡು ರೀತಿಯಲ್ಲಿ ಹೆಸರು ನೀಡುತ್ತದೆಃ (೧) ವಸ್ತುವೊಂದರ ಉಪಯೋಗವು ಸ್ಪಷ್ಟಗೊಂಡು, ’ಸಾಂಸ್ಥೀಕರಣ’ಗೊಂಡ ಮೇಲೆ ಆ ವಸ್ತುವಿಗೆ ಅದರ ಕಾರ್ಯವನ್ನು ಆಧರಿಸಿ ಹುಟ್ಟಿಕೊಳ್ಳುವ ಅಥವ ಕೊಡಲಾಗುವ ಹೆಸರು. ಅಂತಹ ಹೆಸರು ಆ ವಸ್ತುವಿಗೆ ಸೂಕ್ತವಾಗುವದಕ್ಕಿಂತಲೂ ’ನಾಗರೀಕತೆಗೆ ಅದು ಹೇಗೆ ಉಪಯುಕ’ ಎಂಬುದರ ಮೇಲೆ ಆಧಾರವಾಗಿರುತ್ತದೆ ನಾಮಕರಣದ ಸತ್ವ. ಯೋಚಿಸಿ ನೋಡಿಃ ಕಾರ್ಯಬಾಹುಳ್ಯವಿಲ್ಲದ ಅಯೋಮಯ ವಸ್ತುವಿಗೆ ಅನಿರ್ದಿಷ್ಟಿತಯೇ ಹೆಸರು (ಜೊಂಡು, ಜೋಮು, ಆಲಸ್ಯ, ಕ್ಷಿತಿಜ, ಮೋಡ ಇತ್ಯಾದಿ).

ನಾಗರೀಕತೆಗೆ ’ಉಪಯೋಗವಿಲ್ಲದ ವಸ್ತು’ವೆಂಬ ಕಲ್ಪನೆಯೇ ಇರಲರದೇನೋ. ಇದರ ಅರ್ಥವೇನೆಂದರೆ ಆ ವಸ್ತುವಿಗೊಂದು ನಾಗರೀಕ ಪಾತ್ರವು ಇನ್ನೂ ಲಭ್ಯವಾಗಬೇಕಿದೆ ಎಂಬ ಉದ್ದೇಶವೇ ಮುಖ್ಯ ಎಂಬುದು. ಅಂದರೆ ನಾಗರೀಕ ಸ್ಪರ್ಶವಿಲ್ಲದ ವಸ್ತುವು ವಸ್ತುವಾಗಿರಲು ಸಾಧ್ಯವೇ ಇಲ್ಲ, ಹಾಗಿರುವುದು ವಸ್ತುವೂ ಆಗುವುದಿಲ್ಲವೇಕೆಂದರೆ ಅವುಗಳಿಗೆ ವಾಸ್ತವದಲ್ಲಿ ಸಮಾಜದಲ್ಲಿ ವಾಸ್ತವ್ಯವಿರುವುದಿಲ್ಲ. ನಾಮರಹಿತವಾದ, ನಾಮಾತೀತವಾದ ಸ್ಥಿತಿಯಲ್ಲಿರಬಹುದಾದ ವಸ್ತುವನ್ನು ಕಚ್ಚಾಸಾಮಗ್ರಿ ಎಂದೂ ನಾಗರೀಕ ಜಗತ್ತು ವರ್ಗೀಕರಿಸುತ್ತದೆ. ಒಂದು ’ಸ್ಥಿತಿ’ಯಿಂದ ಮತ್ತೊಂದಕ್ಕೆ ವರ್ಗೀಕರಣಗೊಳ್ಳಲು ಕಾಯುವ ವಸ್ತುವೇ ಕಚ್ಚಾಸಾಮಗ್ರಿ. ಕಲೆಯಲ್ಲೂ, ಕಲಾರಂಗದಲ್ಲೂ, ಕಲಾಕೃತಿಯಲ್ಲೂ, ಇಂದಿಗೂ ಕಚ್ಚಾಸಾಮಗ್ರಿ ಮತ್ತು ಕಲಾಮಾಧ್ಯಮಕ್ಕೂ ಇದೇ ವ್ಯತ್ಯಾಸವಿದೆ-ಕಲೆಯ ಜನಪ್ರಿಯ ಪರಿಕಲ್ಪನೆಯಲ್ಲಿ. ಸಮಜದ ಅಂಗವಾದ ಕಲೆಗೂ ಅದು ಒಡಮೂಡುವ ನಾಗರೀಕತೆಯ ಗುಣಲಕ್ಷಣವೇ ಚೌಕಟ್ಟು ಎಂದು ಭಾವಿಸುವವರೆಲ್ಲರೂ (ಕಲೆಯ ಹೊರಗೂ, ಒಳಗೂ) ಕಲಾಮಾಧ್ಯಮವು ಭೌತಿಕವಾದ ಕಚ್ಚಾಸಾಮಗ್ರಿಯ ಪರಿಷ್ಕೃತ ರೂಪವೇ ಎಂದು ಭಾವಿಸುತ್ತಾರೆ.

ಬಹುಪಾಲು ಕಲಾಶಿಕ್ಷಕರು, ಕಲಾವಿದ್ಯಾರ್ಥಿಗಳು, ಕಲೋಪಾಸಕರುಗಳೆಲ್ಲ ಹೀಗೆ ಭಾವಿಸುವುದಾದರೂ, ಸತ್ಯವು ಅದಕ್ಕೆ ಹೊರತಾದುದಾಗಿದೆ. ಈ ಎಲ್ಲರ ಕಲ್ಪನೆಯ ಕಲೆಯು ಭೌತಿಕವಾಗಿ ಘನವಾದ ವಸ್ತುವಿನಿಂದ-ಅದು ಎರಡು ಅಥವ ಮೂರು ಆಯಾಮಗಳಲ್ಲಿರಬಹುದು–ನಿರೂಪಿತವಾದುದಾಗಿರುತ್ತದೆ. ಸಮಕಾಲೀನ ಕಲೆಯಲ್ಲಿ ಅಥವ ನಿಜದಲ್ಲಿ ನಾವು ಭಾವಿಸುವ/ಭಾವಿಸಬೇಕಾದ ಕಲೆಯಲ್ಲಿನ ’ಸಮಕಾಲೀನತೆ’ಯಲ್ಲಿ ಈ ಸಮಾಜ-ನಾಗರೀಕತೆ-ಕೊಳ್ಳುಬಾಕ ವ್ಯವಸ್ಥೆಯಿಂದ ಜನಿಸಿದ ’ವಸ್ತು’ಗಳು; ಮತ್ತು ಅವುಗಳ ಪೂರ್ವಸೂರಿಗಳಾದ ಕಚ್ಚಾಸಾಮಗ್ರಿಗಳೆನ್ನಿಸಿಕೊಂಡ ನೈಸರ್ಗಿಕ ದ್ರವ್ಯಗಳ ನಡುವಣ ಹೆಜಿಮೊನಿಕ್ ಶ್ರೇಣೀಕರಣವು ಅರ್ಥಹೀನವಾಗುತ್ತವೆ.

ಕೇವಲ ಅದರ ಭೀತಿಯಿಂದ ಹೊರಬರಬೇಕೆಂದು ತನ್ನ ಭುಜಕ್ಕೇ ಗುಂಡು (ಅದೇ ಬುಲೆಟ್ ಎನ್ನುತ್ತೇವಲ್ಲ ಅದು) ತಾಗಿಸಿಕೊಳ್ಳುವುದು, ತನ್ನದೇ ಕಾರಿನ ಮೇಲೆ ತನ್ನನ್ನೇ ಮೊಳೆಗಳಿಂದ ಚುಚ್ಚಿಸಿಕೊಂಡು ಊರೆಲ್ಲ ಸುತ್ತಿಸಿಕೊಂಡು ಬರುವುದು, ಸಣ್ಣ ಶಿಲುಬೆಯಾವಸ್ಥೆಯ ಕ್ರೈಸ್ತನನ್ನು ಕಲಾವಿದನದ್ದೇ ಮೂತ್ರವಿರುವ ಜಾಡಿಯಲ್ಲಿರಿಸುವುದು (ರಿಚರ್ಡ್ ಸೆರ್ರ), ಬೃಹತ್ ಕಟ್ಟಡಕ್ಕೇ ಬಟ್ಟೆ ತೊಡಿಸುವುದು (ಕ್ರಿಸ್ಟೋ), ತನ್ನದೇ ಮಲವನ್ನು ಹೂಜಿಯ ಫಾರ್ಮಾಲ್ಡಿಹೈಡಿನಲ್ಲಿರಿಸುವುದು (ವೆಂಕಟಪ್ಪ ಗ್ಯಾಲg, ೨೦೦೩ ಖೋಜ್ ಕಾರ್ಯಾಗಾರ) ಮುಂತಾದ ಕಲಾಕೃತಿಗಳನ್ನು ಮಂದಿ ಭಾವಿಸುವುದು ಹುಚ್ಚಾಟಗಳೆಂದು. ನಿಜದಲ್ಲಿ ಅವರುಗಳು ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ’ವಸ್ತುವಿಗೆ ಅರ್ಥವನ್ನು ಆರೋಪಿಸುವ’ (ಈಗ ಇದಕ್ಕೆ ಮತ್ತೊಂದು ಹೆಸರು ’ಬ್ರಾಂಡಿಂಗ್’) ಕೊಳ್ಳುಬಾಕ ಸಂಸ್ಕೃತಿಯ ಅವಿಭಾಜ್ಯ ಅಂಗದೊಳಕ್ಕೆ ಸೇರಿಬಿಟ್ಟು ಅಲ್ಲಿಂದ ಈ ಮತ್ತು ಇಂತಹ ಕೃತಿಗಳನ್ನು ವರ್ಗೀಕರಿಸಿಕೊಳ್ಳುತ್ತಿರುತ್ತಾರೆ. ವಿಮರ್ಶೆಯ ಉತ್ತಮ-ಅಧಮವೆಂಬ ವರ್ಗೀಕರಣವೂ ಇಂತಹ ಚಿಂತನಾಧಾರೆಯ (ವಸ್ತು ಮೊದಲು, ಅರ್ಥಾನುಭವ ನಂತರ) ಎಂಬ ರೂಢಿಯನ್ನೇ ಬಹುಪಾಲು ಆಧರಿಸಿದ್ದಾಗಿದೆ.

Leave a comment

This site uses Akismet to reduce spam. Learn how your comment data is processed.