’ಚರ್ಚ್’ ಎಸ್.ಎಚ್.ರಝಾರವರ ಕಲಾಕೃತಿಯೊಳಗೊಂದು ನೋಟ

(೨೫-೦೮-೨೦೧೨ರ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ ಲೇಖನ)

೧೯೫೮ರಲ್ಲಿ ಎಸ್.ಎಚ್.ರಾಝ ರಿಂದ ರಚಿಸಲ್ಪಟ್ಟ ಕಲಾಕೃತಿ ’ಚರ್ಚ್’. ಇದು ಅದಾಗಲೇ ಪಾಶ್ಚಿಮಾತ್ಯ ಕಲಾ ಪ್ರಪಂಚದಲ್ಲಿ ಅಂತ್ಯವನ್ನು ಕಂಡಿದ್ದ ಹಲವು ಇಸಂಗಳಲ್ಲಿ ಪ್ರಮುಖವಾದ ಎಕ್ಸ್‌ಪ್ರೆಶನಿಸಂ ಶೈಲಿಯಲ್ಲಿ ರಚಿತವಾಗಿದೆ. ವೀಕ್ಷಣೆಗೆ ದಕ್ಕುವ ವಸ್ತು, ಸನ್ನಿವೇಶ, ಪರಿಸರಕ್ಕೆ ಕಲಾವಿದ ತನ್ನ ಕೃತಿಯೊಳಗೆ ತಾನು ಕಂಡಂತೆ ತನ್ನದೇ ಶೈಲಿಯಲ್ಲಿ ಅಭಿವ್ಯಕ್ತಿಸುವ ಪಂಥವಾದ ಎಕ್ಸ್‌ಪ್ರೆಶನಿಸಂ ಶೈಲಿಯಲ್ಲಿ ಇರುವ ಈ ಕಲಾಕೃತಿಯಲ್ಲಿ ಎಸ್.ಎಚ್.ರಾಝರವರು ತಾವು ನೋಡಿದ ಫಾರ್ನ್ಸ್‌ನಲ್ಲಿನ ಇರುಳಿನ ದೃಶ್ಯವನ್ನು ಅಮೂರ್ತ ರೂಪದಲ್ಲಿ ಇಲ್ಲಿ ಚಿತ್ರಿಸಿದ್ದಾರೆ.

ಇದರ ಶೀರ್ಷಿಕೆ ಹೇಳುವಂತೆ ಇದರಲ್ಲಿನ ವಿಷಯ ಚರ್ಚ್‌ನದ್ದಾಗಿದ್ದರೂ, ಈ ಕಲಾಕೃತಿಯಲ್ಲಿ ಚರ್ಚ್ ಕಲಾಕೃತಿಯಲ್ಲಿ ಕೇಂದ್ರಬಿಂದುವಾಗಿ ಕಂಡುಬರದೆ ಇಡಿ ದೃಶ್ಯದಲ್ಲಿನ ವರ್ಣ ಸಂಯೋಜನೆಯಲ್ಲಿ ತಾನು ಒಂದು ಭಾಗವಾಗಿ ಮಾತ್ರ ಕಂಡು ಬರುತ್ತದೆ. ಭಾರತೀಯ ದೃಶ್ಯಪರಂಪರೆಯ ಹಿನ್ನಲೆ ಹೊಂದಿರುವ ಎಸ್.ಎಚ್.ರಾಝ ರಿಗೆ ಪ್ರಾನ್ಸಿಗೆ ತೆರಳಿದ ೮ ವರ್ಷಗಳ ನಂತರ ರಚಿಸಲ್ಪಟ್ಟಿರುವ ಈ ಕಲಾಕೃತಿಯಲ್ಲಿ, ಧಾರ್ಮಿಕ ಹಿನ್ನಲೆಯಲ್ಲಿ ರಚಿಸಲ್ಪಟ್ಟಿರುವ ಭಾರತೀಯ ಚಿತ್ರಗಳಲ್ಲಿರುವಂತೆ ಧಾರ್ಮಿಕತೆಯ ಚೌಕಟ್ಟುಗಳನ್ನು ಒತ್ತಿ ಹೇಳುವ, ಧಾರ್ಮಿಕ ಅಂಶಗಳನ್ನು ವಿವರಿಸುವ ಅನಿವಾರ್ಯತೆಯ ಪ್ರಭಾವಗಳು ಎಲ್ಲು ಕಂಡುಬಂದಿಲ್ಲದಿರುವುದು ಈ ಚಿತ್ರದಲ್ಲಿ ಕಾಣಬಹುದು.
ಈ ಚಿತ್ರದಲ್ಲಿನ ವರ್ಣಲೇಪನವನ್ನು ಗಮನಿಸಿದಾಗ ಇರುಳಲಿ ಕಂಡಿದ್ದ ಆಗಿನ ಫ್ರಾನ್ಸಿನ ನಿಸರ್ಗ, ವಾಸ್ತುಶಿಲ್ಪ , ಅದರ ಮಧ್ಯೆ ಮಿನುಗುತ್ತಿದ್ದ ಬೆಳಕು ಮತ್ತು ಆ ಕೃತಕವಾಗಿ ಪ್ರಕಾಶಿಸುತ್ತಿರುವ ಬೆಳಕಿನಲ್ಲಿ ಕಂಡುಬರುತ್ತಿದ್ದ ವರ್ಣಗಳ ಪ್ರಖರತೆ, ವಾಸ್ತುಶಿಲ್ಪಗಳ ಗಡುಸುತನವನ್ನು ಕುಂಚದಿಂದ ಮೂಡುವ ಬಣ್ಣದ ಸ್ಟ್ರೋಕ್ಸ್ ಮೂಲಕ ಮೂಡಿಸಲು ಪ್ರಯತ್ನಿಸಿರುವಂತೆ ಕಂಡು ಬರುತ್ತದೆ. ಇದರ ಜೊತೆಗೆ ಕೃತಕ ಬೆಳಕು ಮತ್ತು ಆ ಬೆಳಕಿನಿಂದಾಗಿ ಮೂಡುವ ವರ್ಣಗಳ್ ಮಧ್ಯೆ ಕಳೆದು ಹೋಗುತ್ತಿರುವ ಪ್ರಾನ್ಸ್ ನಗರದ ಭೌತಿಕ ಸ್ಥಿತಿಯನ್ನು ಬಿಂಬಿಸಿರುವಂತೆಯು ಕಾಣುತ್ತದೆ.
ರಝಾರ ಮೆಚ್ಚಿನ ಕಲಾವಿದರಾದ, ವ್ಯಾನ್ಗಾಗ್, ಸಿಜಾನ್, ಗಾಗಿನ್ ಮುಂತಾದ ಫ್ರೆಂಚ್ ಕಲಾವಿದರಿಂದ ಸ್ಪೂರ್ತಿಗೊಂಡು ಅಂದಿನ ಬಾಂಬೆಯಲ್ಲಿದ್ದ ಸಮಾನ ಮನಸ್ಕರ ಗುಂಪಿನ ಮೂಲಕ ಬಾಂಬೆ ಪ್ರೋಗ್ರೆಸ್ಸಿವ್ ಆರ್ಟ್ ಗುಂಪನ್ನು ಪ್ರಾರಂಭಿಸಿದ ಎಸ್.ಎಚ್.ರಾಝರವರು ಬಂಗಾಳಿ ಕಲಾಶಾಲೆಯ ಪ್ರಭಾವದ ವಿರುದ್ದ ಭಾರತೀಯ ಆವಂತ್ ಗಾರ್ಡ್‌ನ್ನು ಚಳುವಳಿಯನ್ನು ಹುಟ್ಟುಹಾಕಿದರು. ಅಲ್ಲಿ ಪಾಶ್ಚಿಮಾತ್ಯದ ಮಾದರಿಯಲ್ಲೇ ಕಲಾಕೃತಿಯಲ್ಲಿ ಇಂಡಿವಿಸ್ಯುಯಲೈಸೇಷನ್ ಹುಡುಕಾಟ ಮತ್ತು ಭಾರತೀಯ ಕಲೆಗೆ ಅಂತರರ್ರಾಷ್ಟ್ರೀಯ ಮಟ್ಟದ ಮಾನ್ಯತೆ ಗುರುತನ್ನು ತರಬೇಕೆಂಬ ಹಂಬಲದಿಂದಿದ್ದ ಎಸ್.ಎಚ್.ರಾಝರವರು ೧೯೫೦ರಲ್ಲಿ ಫ್ರಾನ್ಸ್ ಸೇರಿದರು, ಅಲ್ಲಿನ ಎಂಟು ವರ್ಷಗಳ ಅನುಭವದಲ್ಲಿ ತಮ್ಮ ನಿಸರ್ಗ ದೃಶ್ಯಗಳ ಮೂಲಕ ತಾವು ಪಡೆದ ಅನುಭವ ಮತ್ತು ಅಲ್ಲಿನ ಇಸಂಗಳ ಪ್ರಭಾವ ಈ ಕಲಾಕೃತಿಯ ಮೇಲಾಗಿರುವುದನ್ನು ನಾವು ಈ ಚಿತ್ರದಲ್ಲಿ ಕಾಣಬಹುದು.
ಮುಸ್ಲಿಂ ಧರ್ಮದ ಎಂ.ಎಫ್.ಹುಸೇನ್ ಭಾರತೀಯ ಪುರಾಣಗಳನ್ನಾಧರಿಸಿ ಚಿತ್ರಗಳನ್ನು ತಮ್ಮದೇ ಶೈಲಿಯಲ್ಲಿ ರಚಿಸಿದರೂ ಸಹ ಆ ಚಿತ್ರಗಳಲ್ಲಿ ಪುರಾಣದಲ್ಲಿ ಒತ್ತು ನೀಡಿದಂತಹ ಕೆಲವೊಂದು ರೂಪಕ, ಸಂಯೋಜನೆಗಳ ಪ್ರಭಾವಗಳಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಆದರೆ ಫ್ರಾನ್ಸ್‌ನಲ್ಲಿ ನೆಲೆಸಿದ ರಝಾರವರಿಗೆ ಅಲ್ಲಿನ ಅನ್ಯ ಧರ್ಮದ ಧಾರ್ಮಿಕ ಕೇಂದ್ರವನ್ನು ಚಿತ್ರಿಸುವಾಗ ಈ ರೀತಿಯ ಇತಿ-ಮಿತಿಗಳಿಗೆ ತಮ್ಮನ್ನು ತಾವು ಸೀಮಿತಗೊಳಿಸಿಕೊಂಡು ಚಿತ್ರಿಸಬೇಕಾದ ಅನಿವಾರ್ಯತೆಯನ್ನು ಎದುರಿಸಿದಂತೆ ಎಲ್ಲೂ ಕಂಡುಬರುವುದಿಲ್ಲ. ಹಾಗಾಗಿ ಇಲ್ಲಿ ಕಲಾವಿದನ ಅಭಿವ್ಯಕ್ತಿಯು ಇಸಂನಿಂದ ಹೊರತು ಪಡಿಸಿದಲ್ಲಿ ಇನ್ನುಳಿದ ಎಲ್ಲಾ ರಚನಾಕ್ರಮವು ಸ್ವತಂತ್ರವಾಗಿ ಅಭಿವ್ಯಕ್ತಿಯನ್ನು ಪಡೆದುಕೊಂಡಿದೆ.
ಇದಕ್ಕು ಮುಂಚಿನ ಕೃತಿಗಳಲ್ಲಿ ಹೆಚ್ಚಾಗಿ ತಮ್ಮ ಬಾಲ್ಯದ ನೆನಪಿನಾಳದಲ್ಲಿನ ಕಾಡಿನ, ಊರಿನ ದೃಶ್ಯಗಳನ್ನು ರಚಿಸುತ್ತಿದ್ದ ಎಸ್.ಎಚ್.ರಾಝರವರು ಪ್ರಾನ್ಸ್‌ಗೆ ತೆರಳಿದ ನಂತರ ಜಾಮಿತಿಕ ಆಕೃತಿಗಳಲ್ಲಿ ಅಲ್ಲಿನ ನಿಸರ್ಗ ಚಿತ್ರಗಳನ್ನು ರಚಿಸುತ್ತಿದ್ದವರು ಕ್ರಮೇಣ ತಮ್ಮ ನಿಸರ್ಗ ಚಿತ್ರಣವನ್ನು ಮುಂದುವರೆಸಿದರೂ ಅದರಲ್ಲಿ ಪ್ರಾತಿನಿಧಿಕ ಅಂಶಗಳನ್ನು ಕಡೆಗಣಿಸುತ್ತಾ, ಬಣ್ಣಗಳ ಪ್ರಾಬಲ್ಯ ಹೆಚ್ಚಾಗುವಂತೆ ರಚಿಸುತ್ತಿದ್ದ ಹಂತದಲ್ಲಿ ರಚನೆಯಾದ ಕೃತಿ ಇದಾಗಿದೆ. ಈ ಹಂತದ ಮುಂದಿನ ಭಾಗವೆ ಇವರ ಪ್ರಸಿದ್ದ ’ಬಿಂದು’ ಸರಣಿ.
ಈ ಕಲಾಕೃತಿಯಲ್ಲಿ ಕಾಣುವ ಪ್ರಮುಖ ಅಂಶವೆಂದರೆ, ಈ ಇರುಳ ನಿಸರ್ಗ ಕಲಾಕೃತಿಯಲ್ಲಿ ಮೊದಲ ನೋಟಕ್ಕೆ ಗಮನಸೆಳೆಯುವುದು ಇದರಲ್ಲಿನ ಪ್ರಖರ ವರ್ಣಗಳು. ಈ ಚಿತ್ರ ಇರುಳ ನಿಸರ್ಗ ಚಿತ್ರವಾದರು ಸಹ, ಪಾಶ್ಚಿಮಾತ್ಯ ಕಲಾಕೃತಿಗಳಲ್ಲಿ ತೈಲವರ್ಣ ಬಳಸಿ ರಚಿಸಲ್ಪಡುವ ಕಲಾಕೃತಿಗಳಲ್ಲಿ ಕಂಡುಬರುವ ಗಾಡತೆ ಈ ಕಲಾಕೃತಿಯಲ್ಲಿ ಕಂಡುಬರುವುದಿಲ್ಲ. ತೈಲವರ್ಣ ಬಳಸುವುದರ ಮೂಲಕ ಕಲಾಕೃತಿಯಲ್ಲಿ ಗಾಡತೆಯನ್ನು ಉಂಟುಮಾಡುವುದನ್ನು ಕ್ರಮೆಣ ನಿಲ್ಲಿಸಿದ ಎಸ್.ಎಚ್.ರಾಝರವರು ಕಲಾಕೃತಿಯಲ್ಲಿ ತಮಗೆ ಕಾಣುವ ಮತ್ತು ಅದನ್ನು ಅಭಿವ್ಯಕ್ತಿಸುವ ಕ್ರಮದಲ್ಲಿ ಬಣ್ಣಗಳಿಗೆ ಹೆಚ್ಚು ಮಹತ್ವವನ್ನು ನೀಡಿ ಅವುಗಳ ಪ್ರಖರತೆಯನ್ನು ಉಳಿಸುಕೊಳ್ಳುವಂತಾ ರಚನಾಕ್ರಮವನ್ನು ಪ್ರಾರಂಭಿಸಿರುವುದನ್ನು ಈ ಕಲಾಕೃತಿಯಲ್ಲಿ ಕಾಣುತ್ತೇವೆ.
ಒಟ್ಟಾರೆಯಾಗಿ ಈ ಕಲಾಕೃತಿಯನ್ನು ವೀಕ್ಷಿಸುತ್ತಿದ್ದರೆ, ಇಡೀ ಚಿತ್ರವನ್ನು ಗಾಡಾಂಧತೆ ಆವರಿಸಿದಂತಿದ್ದು, ಅದರ ಮಧ್ಯದಲ್ಲಿ ಚರ್ಚಿನ ಮಧ್ಯದ ಒಳಾಂಗಣವನ್ನು ಪ್ರತಿನಿಧಿಸುವ ಭಾಗದಲ್ಲಿ ಬೆಳಕನ್ನು ಪ್ರತಿನಿಧಿಸುವ ಬಿಳಿ ಬಣ್ಣದ ನೇರ ಲೇಪನ ಎದ್ದು ಕಾಣುತ್ತದೆ ಮತ್ತು ಆ ಬೆಳಕು ತನ್ನ ಸುತ್ತಲೂ ಅವರಿಸಿರುವ ಕತ್ತಲಿನ ಮಧ್ಯದಲ್ಲೂ ತನ್ನ ಅಸ್ತಿತ್ವವನ್ನು ತಾನು ಉಳಿಸಿಕೊಳ್ಳುವುದರ ಜೊತೆಗೆ ತನ್ನ ಸುತ್ತಲಿನ ಪ್ರದೇಶವನ್ನು ಸಾಧ್ಯವಾದಷ್ಟು ಬೆಳಗಿಸುತ್ತಿದೆ ಎಂಬ ಭಾವವನ್ನೂ ಮೂಡಿಸುತ್ತಿದೆ. ಈ ಚಿತ್ರದಲ್ಲಿ ಕಾಣುವ ಮತ್ತೊಂದು ಆಸಕ್ತಿಕರ ಅಂಶವೆಂದರೆ ಚರ್ಚಿನ ಗೋಪುರ. ಕ್ರಿಶ್ಚಿಯನ್ ಧರ್ಮದ ಪ್ರತಿ ಧಾರ್ಮಿಕ ಕಟ್ಟಡದಲ್ಲಿ ಗೋಪುರಕ್ಕೆ ಆಯಾ ಪ್ರದೇಶ ಮತ್ತು ಶೈಲಿಗೆ ಅನುಗುಣವಾಗಿ ಅದರದೇ ಪ್ರಾಮುಖ್ಯತೆ ಹೊಂದಿರುತ್ತದೆ. ಚರ್ಚಿನ ಬಾಹ್ಯ ಅಸ್ತಿತ್ವನ್ನು ಚಿತ್ರಿಸುವಾಗ ಅದು ಕೇವಲ ಅದರ ಆಕಾರವಾಗಿ ಗುರುತಿಸಲ್ಪಟ್ಟು ಅದಕ್ಕೆ ಬಳಸಿರುವ ಕಪ್ಪು ಬಣ್ಣ ಹಿನ್ನಲೆಯಲ್ಲಿನ ಆಕಾಶಕ್ಕೆ ಬಳಸಿರುವ ಕಡು ನೀಲಿ ಬಣ್ಣದಲ್ಲಿ ಕಳೆದುಹೋಗಿರುವಂತೆ ಈ ಚಿತ್ರದಲ್ಲಿ ಚಿತ್ರಿಸಲಾಗಿದೆ.
ಭಾರತದ ಕಲಾ ಇತಿಹಾಸದ ೫೦-೬೦ರ ದಶಕದ ಅವಧಿಯಲ್ಲಿ ಬೆಂಗಾಳಿ ಕಲಾಶಾಲೆಗಳ ಪ್ರಭಾವದಿಂದಾಗಿ ರಚಿತವಾಗುತ್ತಿದ್ದ ಕಲಾಕೃತಿಗಳ ಮಧ್ಯದಲ್ಲಿ ಭಾರತಕ್ಕೆ ತನ್ನದೆ ಆದ ವಯಕ್ತಿಕ ಶೈಲಿಯೊಂದಿಗೆ ಅಂತರಾಷ್ಟ್ರೀಯ ಮಾನ್ಯತೆ ಸಿಗುವಂತ ಕಲಾಕೃತಿಗಳನ್ನು ರಚಿಸಬೇಕೆಂದು ಹುಟ್ಟಿಕೊಂಡ ಗುಂಪಿನಲ್ಲಿನ ಪ್ರಮುಖ ಕಲಾವಿದರಾಗಿದ್ದ ಎಸ್.ಎಚ್.ರಾಝರವರ ಈ ’ಚರ್ಚ್’ ಕಲಾಕೃತಿ ಪ್ರಾನ್ಸಿನಲ್ಲಿ ನೆಲೆಸಿದ ನಂತರ ಹಾಗು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಹೆಸರು ತಂದುಕೊಟ್ಟಂತ ಭಾರತೀಯ ದೃಶ್ಯಪರಂಪರೆಯಲ್ಲಿನ ಸಂಕೇತ, ರೂಪಕಗಳನ್ನು ಬಳಸಿಕೊಂಡು ರಚಿಸುತ್ತಿದ್ದ ’ಬಿಂದು’ ಸರಣಿಗೂ ಮಧ್ಯದ ಅವದಿಯಲ್ಲಿ ಅಲ್ಲಿನ ಶೈಲಿಗಳ ಪ್ರಭಾವಗಳ ಮಧ್ಯದಲ್ಲಿ ವಯಕ್ತಿಕತೆಯನ್ನು ಹುಡುಕುವ ನಿಟ್ಟಿನಲ್ಲಿ ರಚಿಸಿರುವ ಪ್ರಮುಖ ನಿಸರ್ಗ ಚಿತ್ರಗಳಲ್ಲಿ ಪ್ರಮುಖ ಕಲಾಕೃತಿಯಾಗಿದೆ.

ಮಂಸೋರೆ

ಕೃಪೆ: ಪ್ರಜಾವಾಣಿ. ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Leave a comment

This site uses Akismet to reduce spam. Learn how your comment data is processed.