ಅಭಿವ್ಯಕ್ತಿಯ ರೂಪದ ಚೌಕಟ್ಟಿನೊಳಗೊಂದು ಸೃಜನ-ಸ್ಪಂದ
ಪ್ರಸ್ತುತ ಕರ್ನಾಟಕದ ಕಲಾಶಿಕ್ಷಣದಲ್ಲಿ ಅಕಾಡೆಮಿಕ್ ಪ್ರಭಾವದ ನಡುವೆಯೂ ಅಭಿವ್ಯಕ್ತಿಯು ತನ್ನ ಚೌಕಟ್ಟುಗಳನ್ನು ಮೀರಲು ಪ್ರಯತ್ನಿಸುತ್ತಿರುವುದು ಉತ್ತಮ ಬೆಳವಣಿಗೆಯಾದರು ಇದರ ಸಂಖ್ಯೆ ಕಡಿಮೆಯೇ. ಶಿಕ್ಷಣದ ಹೊರಗೆ ಪ್ರಸ್ತುತ ಸಮಕಾಲೀನ ಕಲೆಯಲ್ಲಿ ಹಲವಾರು ಪ್ರಯೋಗಗಳು ನಡೆಯುತ್ತಿದ್ದರು ಅಕಾಡೆಮಿಕ್ ಪದ್ದತಿಯು ತನ್ನ ಅಭಿವ್ಯಕ್ತಿಯ ವ್ಯಾಪ್ತಿಯನ್ನು ಕ್ಯಾನ್ವಾಸಿನ ಚೌಕಟ್ಟಿನೊಳಗೆ ಬಂಧಿಸಿಕೊಂಡಿರುವುದು ವಿಪರ್ಯಾಸವೇ ಸರಿ.
ಇದಕ್ಕೊಂದು ಉದಾಹರಣೆಯಾಗಿ ಇತ್ತೀಚಿಗೆ ರಸ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಗೊಂಡ ‘ಸೃಜನ-ಸ್ಪಂದ’ ಸಮೂಹ ಪ್ರದರ್ಶನವನ್ನು ಉದಾಹರಿಸಬಹುದು. ಇದು ಬೆಂಗಳೂರು ವಿಶ್ವವಿದ್ಯಾಲಯದಿಂದ ಇದೀಗ ತಾನೆ ಸ್ನಾತಕೋತ್ತರ ಪದವಿ ಮುಗಿಸಿರುವ ೮ ಜನ ಯುವ ಕಲಾವಿದರ ಕಲಾಪ್ರದರ್ಶನವಾಗಿದ್ದು, ಇವರ ಕಲಾಕೃತಿಗಳು ತಮ್ಮ ಅಕಾಡೆಮಿಕ್ ಪ್ರಭಾವದೊಳಗೆ ರೂಪ(form) ಮತ್ತು ಕೌಶಲ್ಯತೆ(craftmanship)ಯನ್ನು ಮೀರಿದ ಅನುಭೂತಿಯನ್ನು ನೀಡುವಲ್ಲಿ ಸಫಲವಾಗದಿದ್ದರು, ವಿಧಾರ್ಥಿಗಳು ಎಂಬ ಪರಿಮಿತಿಯಲ್ಲಿ ಕಲಾಕೃತಿಗಳು ಮೆಚ್ಚುಗೆಯಾಗುವಲ್ಲಿ ವಿಫಲವಾಗುವುದಿಲ್ಲ. ಇದಕ್ಕೆ ಕಾರಣ ನೀಡುವುದಾದರೆ ಇಲ್ಲಿರುವ ಬಹುತೇಕ ಕಲಾಕೃತಿಗಳು ಶೀರ್ಷಿಕೆ ರಹಿತವಾದದ್ದಾಗಿವೆ.
ಈ ಹಿಂದೆ ಕಲಾಕೃತಿಯ ರಚನಾನಂತರ ಕಲಾವಿದನಿಗೆ ತನ್ನ ಕಲಾಕೃತಿ ತನ್ನ ಉದ್ದೇಶವನ್ನು ಮೀರಿ ಅಭಿವ್ಯಕ್ತಿಯ ಸಾಧ್ಯತೆಗಳನ್ನು ಹೊಂದಿದ್ದಲ್ಲಿ ನೋಡುವ ವೀಕ್ಷಕನಿಗೆ ಶೀರ್ಷಿಕೆಯು ಕಲಾಕೃತಿಯನ್ನು ನೋಡುವಲ್ಲಿ ಸೀಮಿತಗೊಳಿಸದಿರಲಿ ಎಂ ಉದ್ದೇಶಕ್ಕಾಗಿ ಶೀರ್ಷಿಕೆ ಇಡುತ್ತಿರಲಿಲ್ಲ. ಆದರೆ ಇಲ್ಲಿನ ಕಲಾಕೃತಿಗಳು ಅಂತಹ ಅನುಭೂತಿಯ ಬಹುಮುಖ ಸಾಧ್ಯತೆಗಳನ್ನು ಹೊಂದಿಲ್ಲವಾದರು, ಶೈಕ್ಷಣಿಕ ಸಂಸ್ಥೆಗಳು ಕಲಾವಿದರನ್ನು ತಯಾರು ಮಾಡುವ ನಿಟ್ಟಿನಲ್ಲಿ ಕಲಾಕೃತಿಯ ರಚನೆಗೆ ನೀಡಿದ ಒತ್ತು, ಕಲಾಕೃತಿಯೊಳಗಿನ ಬೌದ್ದಿಕ ಅಭಿವ್ಯಕ್ತಿಗೆ ನೀಡದಿರುವುದು, ಶಿಕ್ಷಣ ಸಂಸ್ಥೆಗಳಿಂದ ಹೊರಬರುವ ವಿಧ್ಯಾರ್ಥಿಗಳು ತಾವೇ ರಚಿಸಿರುವ ಕಲಾಕೃತಿಗಳ ಬಗ್ಗೆ ಮಾತಾಡಲು ಹಿಂಜರಿಯುವುದನ್ನು ಈ ಶೀರ್ಷಿಕೆ ರಹಿತ ಕಲಾಕೃತಿಗಳ ಮೂಲಕ ಕಾಣಬಹುದು.
ಈ ಪ್ರದರ್ಶನದಲ್ಲಿ ಕಂಡುಬರುವ ಮತ್ತೊಂದು ಪ್ರಮುಖ ಅಂಶವೆಂದರೆ ಈ ಕಲಾಕೃತಿಯ ರಚನೆಯಲ್ಲಿ ಕಲಾವಿದರಿಗೆ ಯಾವುದೇ ಗೊಂದಲಗಳಿಲ್ಲದಿರುವುದು. ಇದು ಸಕಾರಾತ್ಮಕವೂ ಆಗಬಹುದು ನಕಾರಾತ್ಮಕವೂ ಆಗಬಹುದು. ಈ ಪ್ರದರ್ಶನದಲ್ಲಿ ಭಾಗವಹಿಸಿರುವ ಕಲಾವಿದರೆಲ್ಲ ಹಲವು ಸಂಸ್ಥೆಗಳಲ್ಲಿ ತಮ್ಮ ಪದವಿ ಪಡೆದು ಒಂದೆಡೆ ಸ್ನಾತಕೋತ್ತರ ಅಭ್ಯಾಸ ಮಾಡಿರುವುದರಿಂದ ಪ್ರತಿ ಕಲಾವಿದರ ಕಲಾಕೃತಿಗಳು ಅಭಿವ್ಯಕ್ತಿ, ವಿಚಾರ, ಸ್ವಂತಿಕೆಗೆ ಸಂಭಂದಿಸಿದಂತೆ ವಿಭಿನ್ನತೆಯಿಂದ ಕೂಡಿದ್ದರೂ, ವಿಷಯದ ಆಯ್ಕೆಯಲ್ಲಿ ಬಹುತೇಕ ಸಾಮ್ಯತೆಗಳನ್ನು ಹೊಂದಿರುವುದು ಕಾಣಬಹುದು. ಇಲ್ಲಿ ಪ್ರದರ್ಶಿತ ಗೊಂಡಿರುವ ಕಲಾಕೃತಿಗಳಲ್ಲಿ ನಗರೀಕರಣ, ಮೆಟ್ರೋ ನಗರಗಳ ಪ್ರಭಾವ, ನಗರಗಳಲ್ಲಿ ಕಳೆದು ಹೋಗುತ್ತಿರುವ ಜೀವ ಸಂಕುಲಗಳು ಬಹುತೇಕ ಕಲಾವಿದರಿಗೆ ಕಾಡಿರುವ ಪ್ರಮುಖ ಅಂಶಗಳಾಗಿವೆ. ಇದರ ಮಧ್ಯೆ ನಾಸ್ಟಾಲಜಿಯ ರಮ್ಯ ಕಲ್ಪನೆಗಳೂ ಸೇರಿವೆ. ಒಟ್ಟಾರೆ ಪ್ರದರ್ಶನ ಪ್ರಸ್ತುತ ಕಲಾವಲಯಕ್ಕೆ ಪ್ರವೇಶ ಪಡೆಯುತ್ತಿರುವ ಭರವಸೆಯ ಕಲಾವಿದರನ್ನು ಪರಿಚಯಿಸುವುದರ ಜೊತೆಗೆ, ಕಲಾಶಿಕ್ಷಣವು ತನ್ನೊಳಗಿನ ಬೌದ್ಧಿಕ ಕೊರತೆಗಳನ್ನು ನೀಗಿಸಿಕೊಳ್ಳುವಲ್ಲಿ ಗಮನ ಹರಿಸಬೇಕಾದ ಅಗತ್ಯತೆಯನ್ನು ಎತ್ತಿ ತೋರಿಸುತ್ತದೆ.
ಆಶಾರಾಣಿ, ದೀಪು ಎಸ್.ಆರ್, ಜಗದೀಶ್, ಸಾಗರ್ ದಂಡೊಟಿ, ಶಿವಯೋಗಿ ಆರ್ ಅಣ್ಣಾವರ್, ಸುಜಾತ ಶೆಟ್ಟಿ, ಶ್ವೇತಾ ವೈ, ವೀರೇಶ್ ರುದ್ರಸ್ವಾಮಿಯವರ ಕಲಾಕೃತಿಗಳ ಪ್ರದರ್ಶನವು ೦೮-೦೯-೨೦೧೨ ರಿಂದ ೧೩-೦೯-೨೦೧೨ರವರೆಗೆ ಶಾಂತಿನಗರದ ಜೋಡಿ ರಸ್ತೆಯಲ್ಲಿರುವ ರಸ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿತಗೊಂಡವು.
ಈ ಪ್ರದರ್ಶನದ ಕ್ಯಾಟಲಾಗ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ