ಅಮೂರ್ತತೆಯಲ್ಲಿ ಮೂಡಿದ ಭಯದ ಮೂರ್ತ ರೂಪಗಳು

ಅಮೂರ್ತತೆಯಲ್ಲಿ ಮೂಡಿದ ಭಯದ ಮೂರ್ತ ರೂಪಗಳು

ಆ ಕಟ್ಟಡದಲ್ಲಿ ಒಂದೊಂದೇ ಅಂತಸ್ತನ್ನು ಏರುತ್ತಿದ್ದ ಆ ಯುವ ಛಾಯಾಗ್ರಾಹಕನಿಗೆ ಅದರ ಹಿಂದಿನ ದಿನ ನಡೆದ ಘಟನೆಯಲ್ಲಿ ಸುಟ್ಟು ಕರಕಲಾದ ಮಹಡಿಯ ಒಳಗಿನ ಒಂದೊಂದು ರೂಪವು, ಅಲ್ಲಿ ಘಟನೆ ನಡೆಯುವಾಗ ಅಲ್ಲಿ ಸಿಲುಕಿದ್ದ ಜನಗಳ ಮನಸೊಳಗೆ ತುಂಬಿದ್ದ ಭೀತಿಯನ್ನು ಪ್ರತಿಬಿಂಬಿಸುತ್ತಿದ್ದವು. ಇಡೀ ಕಟ್ಟಡದಲ್ಲಿ ಹೆಚ್ಚು ಹಾನಿಗೆ ಒಳಗಾಗಿದ್ದ ಆರು ಮತ್ತು ಏಳನೇ ಅಂತಸ್ತಿನಲ್ಲಿ ಎಲ್ಲಿ ನೋಡಿದರು ಆ ಛಾಯಾಗ್ರಾಹಕನಿಗೆ ಕಾಣುತ್ತಿದ್ದದ್ದು ಬೆಂಕಿಯಿಂದ ಸುಟ್ಟು ಕರಕಲಾದ ವಸ್ತುಗಳು, ಗೋಡೆಗಳು, ಕಿಟಕಿ ಬಾಗಿಲುಗಳು, ಅದರ ಮೇಲೆ ಮೂಡಿರುವ ಘಟನೆಯ ಭೀಕರತೆಯನ್ನು ಮೂರ್ತಗೊಳಿಸುವ ಅಮೂರ್ತ ರೂಪಗಳು, ಆ ಗುರುತಗಳು ಯಾವುವು ಉದ್ದೇಶಪೂರ್ವಕವಾಗಿ ಮೂಡಿಸಿದ ಗುರುತುಗಳಲ್ಲ, ಬೆಂಕಿ ಹೊತ್ತಿಕೊಂಡಾಗ ಅಲ್ಲಿದ್ದ ಜನರು ಅಲ್ಲಿಂದ ತಪ್ಪಿಸಿಕೊಂಡು ತಮ್ಮ ತಮ್ಮ ಜೀವವನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ ಆತುರದಲ್ಲಿ ಮೂಡಿ ಆ ಘಟನೆಗೆ ಸಾಕ್ಷೀಭೂತವಾಗಿ ಉಳಿದಿರುವ ಗುರುತುಗಳವು. ಅಲ್ಲಿ ನಡೆದಿರಬಹುದಾದ ಘಟನೆಯನ್ನು ಛಾಯಾಗ್ರಾಹಕನಿಗೆ ಉದ್ದೀಪಿಸಲು ಉಳಿದಿರುವ ಪಳೆಯುಳಿಕೆಗಳವು.

Forms_Of_Fear_02

ಅಲ್ಲಿನ ವಾಸ್ತವತೆಯನ್ನು ದಾಖಲಿಸಲು ಹೋಗಿದ್ದ ಆ ಛಾಯಾಗ್ರಾಹಕನಿಗೆ ಬೆಂಕಿಯಿಂದಾಗಿ ಬಾಹ್ಯ ರೂಪವನ್ನು ಕಳೆದುಕೊಂಡಿದ್ದ ವಸ್ತುಗಳಿಗಿಂತ, ಆ ಘಟನೆಯ ಸಮಯದಲ್ಲಿ ನಡೆದ ಕ್ರಿಯೆ-ಪ್ರತಿಕ್ರಿಯೆಯಿಂದಾಗಿ ಮೂಡಿದ ಈ ರೂಪಗಳೆ ಹೆಚ್ಚು ಆಸಕ್ತಿಕರವಾಗಿ ಕಂಡವು. ಅಲ್ಲಿಂದ ಸತತ ಮೂರು ವಾರಗಳ ಕಾಲ ಅಲ್ಲಿನ ರೂಪಗಳನ್ನು ತನ್ನದೇ ತಾಂತ್ರಿಕ ಪರಿಣಿತಿಯನ್ನು ಪ್ರಯೋಗಿಸಿ ಚಿತ್ರಗಳಲ್ಲಿ ಸೆರೆಹಿಡಿದು ದಾಖಲಿಸಿದ ಛಾಯಾಗ್ರಾಹಕ ನಿರಂಜನ್ ಜಿ. ಹೊಸ್ಮನೆ. ಆ ಘಟನೆ ನಡೆದಿದ್ದು ೨೦೦೯ರ ಫೆಬ್ರವರಿ ತಿಂಗಳ ೨೩ರಂದು, ಎಚ್‌ಎಎಲ್ ರಸ್ತೆಯಲ್ಲಿದ್ದ ಕಾರ್ಟನ್ ಟವರ್‌ನಲ್ಲಿ. ಇವರ ಈ ಛಾಯಾಚಿತ್ರಗಳನ್ನು ಕೆ.ಹೆಚ್.ರಸ್ತೆ(ಡಬಲ್ ರೋಡ್ ಶಾಂತಿನಗರ) ರಸ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿಡಲಾಗಿದೆ. ಚಿತ್ರಕಲಾ ಪರಿಷತ್ತಿನ ಚಿತ್ರಕಲಾ, ಮಹಾವಿದ್ಯಾಲಯದಲ್ಲಿ ಅನ್ವಯಕಲೆಯಲ್ಲಿ ಪದವಿಯನ್ನು ಪಡೆದಿರುವ ನಿರಂಜನ್ ಜಿ. ಹೊಸ್ಮನೆ ಮೂಲತಃ ಗೋಕರ್ಣದವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ನಿರಂಜನ್ ಜಿ. ಹೊಸ್ಮನೆ ಸ್ವತಂತ್ರ ಛಾಯಾಗ್ರಾಹಕರಾಗಿ, ಕಲಾವಿದರಾಗಿ ಕಲಾಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪದವಿಯ ನಂತರ ಇಂಗ್ಲೀಷ್ ದೈನಿಕ ಪತ್ರಿಕೆಯಲ್ಲಿ ಸಹಾಯಕ ಛಾಯಾಗ್ರಹಕರಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಡೆದ ಈ ಬೆಂಕಿ ದುರಂತವನ್ನು ದಾಖಲಿಸುವ ಸಲುವಾಗಿ ಹೋದ ಇವರಿಗೆ ಈ ಘಟನೆಯನ್ನು ತಮ್ಮದೇ ಕೋನದಲ್ಲಿ ದೃಶ್ಯೀಕರಿಸಲು ಪ್ರೇರೇಪಿಸಿದ್ದು ಈ ಮೂರ್ತತೆಯನ್ನು ಉದ್ದೀಪಿಸುವ ಅಮೂರ್ತ ರೂಪಗಳು.

ಸ್ವಾಭಾವಿಕವಾಗಿ ಮೂಡಿರುವ ಈ ಚಿತ್ರದ ರೂಪಗಳಲ್ಲಿ, ಅರ್ದ್ರತೆ ಇದೆ, ಭೀತಿ ಇದೆ, ಸಿಗ್ಮಂಡ್ ಫ್ರಾಯ್ಡ್ ತನ್ನ ಮನೋವಿಜ್ಞಾನಕ್ಕೆ ಸಂಭಂದಿಸಿದ ಸಿದ್ದಾಂತದಲ್ಲಿ ಹೇಳುವಂತೆ, ಮಾನವನಿಗೆ ತನ್ನ ಮೇಲೆ ತನಗೆ ಅರಿವಿಲ್ಲದ ಸಮಯದಲ್ಲೂ ಸಹ ತನ್ನ ಹಿಂದಿನ ಅನುಭವಗಳು, ಆತನ ನಡವಳಿಕೆಯ ಮೇಲೆ ಪ್ರಭಾವ ಬೀರುತ್ತದೆಯಂತೆ,. ಸಾವಿನ ಭೀತಿಯನ್ನು ಎದುರಿಸುವ ಮನುಷ್ಯನಿಗೆ ತನ್ನ ಮುಂದಿನ ನಡೆಯ ಬಗ್ಗೆ ಸ್ಪಷ್ಟ ಅರಿವಿರುವುದಿಲ್ಲ, ಸಾವಿನ ಭೀತಿಯಿಂದ ತಪ್ಪಿಸಿಕೊಳ್ಳುವುದಷ್ಟೆ ಮುಖ್ಯವಾಗಿರುತ್ತದೆ, ತನ್ನನ್ನು ತಾನು ರಕ್ಷಿಸಿಕೊಳ್ಳಲು ಮಾಡುವ ಪ್ರಯತ್ನ, ಆತುರತೆಯನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಈ ಚಿತ್ರಗಳು, ಅದು ಪ್ರತಿನಿಧಿಸುವ ಭೀಕರತೆಯನ್ನು ತಮ್ಮೊಳಗಿನ ವರ್ಣ, ಆಕಾರ ಮತ್ತು ರೂಪಗಳ ಮೂಲಕ ಅಭಿವ್ಯಕ್ತಿಸುತ್ತವೆ. ಇದರ ಜೊತೆಗೆ ಈ ಚಿತ್ರಗಳಲ್ಲಿ ಕಾಣಸಿಗುವ ಕಾಲಿನ ಶೂ ಗುರುತುಗಳು ಗೊಡೆಗಳ ಮೇಲಿನ ಹಸ್ತದ ಗುರುತುಗಳು.. ಮೆಟ್ರೋ ನಗರಗಳಲ್ಲಿನ ಜೀವನ ಶೈಲಿ ಮತ್ತು ಅನಿವಾರ್ಯತೆಗಳ ಮಧ್ಯೆ, ಬದುಕಿನ ಬಂಡಿ ಸಾಗುತ್ತಿರುವ ವೇಗದ ಮೂಲಕ ಉದ್ಬವವಾಗುತ್ತಿರುವ ಸಮಸ್ಯೆಗಳಲ್ಲಿ ತನ್ನ ಪಾತ್ರ ಮತ್ತು ಅಸ್ತಿತ್ವದ ಸ್ಪಷ್ಟ ಗುರುತುಗಳನ್ನು ಮೂಡಿಸಿರುವಂತೆಯೂ ಕಾಣುತ್ತದೆ.

ಈ ಚಿತ್ರಗಳನ್ನು ಸೆರೆಹಿಡಿಯುವ ಸಂದರ್ಭದಲ್ಲಿ ನಿರಂಜನ್‌ರ ಮೇಲೆ ಫ್ರೆಂಚ್ ಕಲಾವಿದ ವ್ಯೊಸ್ ಕ್ಲೈನ್ (Yves Klein) ಪ್ರಭಾವ ಬೀರಿದ್ದಾಗಿ ಹೇಳಿಕೊಳ್ಳುತ್ತಾರೆ. ಅಭಿನಯ ಕಲೆಯ ಮೂಲಕ ಕ್ಯಾನ್ವಾಸ್ ಮೇಲೆ ದೇಹವನ್ನೇ ಕುಂಚವನ್ನಾಗಿ ಬಳಸಿ ಅದರ ಮೂಲಕ ಮೂಡುವ ರೂಪಗಳನ್ನೆ ಚಿತ್ರವನ್ನಾಗಿಸುವ ಕ್ಲೈನ್ ಚಿತ್ರಗಳಂತೆ, ಕಟ್ಟಡದ ಒಳಗಿನ ರೂಪಗಳು ಕಂಡವೆಂದು ನಿರಂಜನ್ ಹೇಳುತ್ತಾರೆ. ಆದರೆ ಕ್ಲೈನ್ ಚಿತ್ರಗಳಿಗು ಮತ್ತು ನಿರಂಜನ್ ಚಿತ್ರಗಳಿಗು ಇರುವ ವ್ಯತ್ಯಾಸವೆಂದರೆ ಕ್ಲೈನ್ ಚಿತ್ರಗಳು ಕ್ಯಾನ್ವಾಸಿನ ಮೇಲೆ ಮೂಡುವಾಗ, ಅದನ್ನು ಮೂಡಿಸುವ ಕರ್ತನ ಅಧೀನವನ್ನು ಮೆಟ್ಟಿ ಪ್ರಭಾವಿತವಲ್ಲದ ಸ್ವತಂತ್ರ ರೂಪುಗಳು ಪಡೆದುಕೊಳ್ಳುತ್ತವೆಯಾದರು, ಅದನ್ನು ರಚಿಸುವ ಕ್ರಮ ಉದ್ದೇಶಪೂರ್ವಕವಾಗಿರುತ್ತವೆ. ಆದರೆ ಇಲ್ಲಿ ರೂಪಿಸುವ, ರೂಪುಗೊಂಡ ನಂತರದ ಎರಡೂ ಸ್ಥಿತಿಗಳ ಹಿಂದೆ ಯಾವುದೇ ಪೂರ್ವಾಗ್ರಹವಿಲ್ಲ. ಇಲ್ಲಿ ಪೂರ್ವಾಗ್ರಹವಿರುವುದು ಅದನ್ನು ದಾಖಲಿಸುವ ಕ್ರಮದಲ್ಲಿ. ಕಲಾತ್ಮಕ ಚೌಕಟ್ಟಿಗೆ ಒಳಗಾಗಿರುವ ಈ ರೂಪಗಳಿಗೆ ಅಧಿಕೃತವಾಗಿ ಕರ್ತ (Creator) ಯಾರು ಇಲ್ಲದಿರುವುದರಿಂದ ಅದನ್ನು ದಾಖಲಿಸಿರುವವರೆ ಈ ರೂಪುಗಳ ಮೇಲೆ ತನ್ನ ಅಧಿಕೃತತೆಯನ್ನು ಸ್ಥಾಪಿಸುವುದರಿಂದ, ಕಲಾವಲಯದೊಳಗಿನ ಐಡೆಂಟಿಟಿಗಾಗಿ ಕೃತಿ ರಚನೆ, ಕೃತಿಯಲ್ಲಿ ಐಡೆಂಟಿಟಿ ಇರಬೇಕೆಂಬ ಎಂಬ ಆಲೋಚನಾ ಕ್ರಮವನ್ನೆ ಈ ಕೃತಿಗಳ ಮೂಲಕ ಪ್ರಶ್ನಿಸಬಹುದಾಗಿದೆ.

Leave a comment

This site uses Akismet to reduce spam. Learn how your comment data is processed.