ಮರೆಯಾದ ಕನ್ನಡ ದೃಶ್ಯಕಲಾ ಸಾಹಿತಿಗಳು -ಎಚ್. ಎ. ಅನಿಲ್ ಕುಮಾರ್

Marishamachar, A.L.Narasimhan
Marishamachar, A.L.Narasimhan

ಎರಡು ದಿನಗಳ ವ್ಯತ್ಯಾಸದಲ್ಲಿ ತೀರಿಕೊಂಡ ಎನ್. ಮರಿಶಾಮಾಚಾರ್ (೩ನೇ ಏಪ್ರಿಲ್) ಮತ್ತು ಡಾ. ಅ.ಲ.ನರಸಿಂಹನ್ (೫ನೇ ಏಪ್ರಿಲ್ ೨೦೧೩) ಅವರುಗಳಿಬ್ಬರೂ ಕೆನ್ ಕಲಾಶಾಲೆಯಲ್ಲಿ ಒಟ್ಟಿಗೆ ಓದಿದವರು, ಇಬ್ಬರೂ ಆರ್.ಎಂ. ಹಡಪದ್ ಅವರ ಶಿಷ್ಯರಾಗಿದ್ದವರು. ತದನಂತರ ವಿಭಿನ್ನ ಹಾದಿಗಳನ್ನು ತುಳಿದರೂ, ಅನೇಕ ಇತರೆ ದೃಶ್ಯಕಲಾ ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಸಹ ಮುಖ್ಯವಾಗಿ ಇಬ್ಬರೂ ಕನ್ನಡದ ಕಲಾಸಾಹಿತಿಗಳಾಗಿಯೇ ’ಜನಪ್ರಿಯ’ರಾದವರು. ಕನ್ನಡದ ದೃಶ್ಯಕಲಾ ಸಾಹಿತ್ಯದಲ್ಲಿ ತಾರ್ಕಿಕತೆಗಿಂತಲೂ ಇಂದಿಗೂ ಜನಪ್ರಿಯದ್ದೇ ಮಾನದಂಡ. ಈ ಮಾತಿಗೆ ಶೈಕ್ಷಣಿಕ ಕ್ಷೇತ್ರವೂ ಹೊರತಲ್ಲ. ಹಾಗಿದ್ದರೂ ಪರಸ್ಪರರ ಸ್ನೇಹವನ್ನು ಹಾಗೆಯೇ ಉಳಿಸಿಕೊಂಡಿದ್ದರೂ ಸಹ. ಜೊತೆಯಾಗಿ ಮರಿ ಮತ್ತು ಅಲನ ಅವರುಗಳು ಅನೇಕ ಬೃಹತ್ ಕಲಾಹೊತ್ತುಗೆಗಳನ್ನು ಸಂಪಾದಿಸಿದ್ದಿದೆ. ಬೃಹತ್ ಹೊತ್ತುಗೆಗಳಾದ ಚಿತ್ರಕಲಾ ಪ್ರಪಂಚ, ಶಿಲ್ಪಪ್ರಪಂಚ, ಕಲಾಕೋಶ ಇತ್ಯಾದಿಗಳೇ ಅದಕ್ಕೆ ಸಾಕ್ಷಿ.

’ಮರಿ’ಯವರು ಕೆ.ಕೆ.ಹೆಬ್ಬಾರ್ ಮತ್ತು ಕೆ.ಜಿ.ಸುಬ್ರಹ್ಮಣ್ಯನ್ ಅವರುಗಳ ಬಳಿ ಮತ್ತು ಬರೋಡದ ಕಲಾ ಶಾಲೆಯಲ್ಲಿ ಶಿಷ್ಯವೃತ್ತಿ ಕೈಗೊಂಡು ಬೆಂಗಳೂರಿಗೆ ಹಿಂದಿರುಗಿದರೆ, ಅ.ಲ.ನರವರು ಬೆಂಗಳೂರಿನಲ್ಲಿ ನೆಲೆಸಿ ಇತಿಹಾಸ ಮತ್ತು ಗೆಝೆಟಿಯರ್ ಕೆಲಸದ ಮೇಲೆ ಬೆಂಗಳೂರಿನಿಂದ ಹೊರಗೆಲ್ಲಾ ಸುತ್ತಾಡುವ ವೃತ್ತಿಯನ್ನು ಕೈಗೊಂಡಿದ್ದರು. ಇಷ್ಟಾದರೂ ಇಬ್ಬರೂ ಭಾರತದ ಗಡಿಯೊಳಗಿನ ಕಲೆಯ ಬಗ್ಗೆಯೇ ಅಧಿಕಾರಯುತವಾಗಿ ಬರೆದರು ಮತ್ತು ದೇಶದ ಗಡಿಯನ್ನು ಕೊನೆಗೂ ಭೌತಿಕವಾಗಿ ಅಥವ ಅನುಭವಾತ್ಮಕವಾಗಿ ದಾಟದೇ ಹೋದರು. ಬದಲಿಗೆ ಕೋಶ ಓದುವುದರಲ್ಲಿ ಮತ್ತು ದೃಶ್ಯಸಾಹಿತ್ಯವನ್ನು ಸೃಷ್ಟಿಸುವಲ್ಲಿ ನಿರತರಾದರು. ಕಳೆದ ನಾಲ್ಕು ದಶಕಗಳಿಂದ ದೃಶ್ಯಕಲೆಯನ್ನು ಕುರಿತಾದ ಕರ್ನಾಟಕದ ಸರಕಾರದ ನಿಲುವನ್ನು ಹೆಚ್ಚೂಕಡಿಮೇ ಏಕಾಂಗಿಯಾಗಿ ನಿರ್ಧರಿಸಿದವರೂ ಇವರಿಬ್ಬರೇ! ಕ್ಲೀಷೆಯೊಂದನ್ನು ಬಳಸಿ ಹೇಳಬಹುದಾದರೆ,ಸ್ವಾತಂತ್ರೋತ್ತರ ಕರ್ನಾಟಕ ಸರ್ಕಾರದ ದೃಶ್ಯಕಲಾ ಗ್ರಹಿಕೆಯ ನಿಯಮಾವಳಿಗಳ ಸಾಧಕಬಾದಕಗಳಿಗೆ ಹೆಚ್ಚೂಕಡಿಮೆ ಇವರಿಬ್ಬರೇ ಹೊಣೆ.
*
ಲಲಿತಕಲೆ, ಶಿಲ್ಪಕಲೆ ಮುಂತಾದ ವಿವಿಧ ಸಾಂಸ್ಕೃತಿಕ ಅಕಾಡೆಮಿಗಳಲ್ಲಿ ಗುರುತರ ಜವಾಬ್ದಾರಿಯ ಕೆಲಸ ಮಾಡಿದರೂ ’ಮರಿ’ಯಾಗಿಯೇ ಕರ್ನಾಟಕದಾದ್ಯಂತ ಗುರುತಿಸಿಕೊಂಡಿದ್ದವರು ’ಮರಿ’. ಸಮಗ್ರ ರಾಜ್ಯದಾದ್ಯಂತದ ದೃಶ್ಯಕಲಾವಿದರುಗಳಿಗೆ ಆಡಳಿತಾತ್ಮಕ ವಿಷಯಗಳೇನೇ ಇದ್ದರೂ ಅವರೆಲ್ಲಾ ಸಂಪರ್ಕಿಸುತ್ತಿದ್ದುದು ಇವರನ್ನು. ಮತ್ತು ಅವರ ಎಲ್ಲ ಸಮಸ್ಯೆಗಳಿಗೂ ಇವರ ಬಳಿ, ಇವರದ್ದೇ ಆದ ಪರಿಹಾರವೂ ದೊರಕಿಬಿಡುತ್ತಿತ್ತು. ಆದ್ದರಿಂದ ಮರಿಶಾಮಾಚಾರರು ಯಾವ್ಯಾವ ಅಕಾಡೆಮಿಗಳಲ್ಲಿ ಯಾವ್ಯಾವ ಹುದ್ದೆಯಲ್ಲಿದ್ದರು ಎಂದು ಯಾರನ್ನೂ ಕೇಳಿದರೂ ದೊರಕುವುದು ಒಂದೇ ಉತ್ತರ: ಅವರು ಜೀವನ ಪರ್ಯಂತ ’ಮರಿ’ ಎಂಬ ಹುದ್ದೆಯನ್ನು ರಿಜಿಸ್ಟ್ರಾರ್ ಆಗಿ, ಪ್ರದರ್ಶನಾಧಿಕಾರಿಯಾಗಿ ವಹಿಸಿದ್ದರು ಎಂದು! ಜೊತೆಗೆ ಅವರು ಚಿತ್ರಕಾರ, ಶಿಲ್ಪಿ, ಛಾಯಾಚಿತ್ರಗ್ರಾಹಕ, ಕಲಾಬರಹಗಾರರಾಗಿಯೂ ಸಾಧ್ಯಂತವಾಗಿ ’ಮರಿ’ಯ ಪಾತ್ರವಹಿಸಿದ್ದರು. ದೃಶ್ಯಕಲೆಯಲ್ಲಿ ನಿರ್ದಿಷ್ಟ ನವನವೀನ ಕ್ಷೇತ್ರವ್ಯಾಪ್ತಿಯನ್ನು ಅವರ ಗುರುಗಳು ರೂಪಿಸಿದಂತೆ ಇವರೂ ರೂಪಿಸದೇ ಸ್ವತಃ ಒಂದು ಕ್ಷೇತ್ರವಾಗಲು ಹೊರಟಿದ್ದು ಒಂದು ಸಾಧನೆಯೂ ಹೌದು, ಸರ್ಕಾರಿ ಅಧಿಕಾರಿ-ಕಲಾವಿದರಾಗಿ ಸ್ವತಃ ತಮಗೆ ತಾವೇ ಹಾಕಿಕೊಂಡ ಇತಿಮಿತಿಯೂ ಹೌದು. ತದ್ವಿರುದ್ಧವಾಗಿ ಅಲನ ಅವರು ಕೆನ್ ಕಲಾಶಾಲೆಯಿಂದ ಪ್ರಕಟವಾಗುತ್ತಿದ್ದ ’ಕಲಾವಿಕಾಸ’ದಂತಹ ಸಣ್ಣ ಪತ್ರಿಕೆಯ ಸಂಪಾದಕತ್ವವನ್ನೂ ಹಲವು ವರ್ಷಗಳ ಕಾಲ ವಹಿಸಿಕೊಂಡಿದ್ದರು. ೧೯೭೦ರ ದಶಕದಿಂದ ಕನ್ನಡದಲ್ಲಿ ಕಲೆಯನ್ನು ಕುರಿತ ಸಣ್ಣಪುಟ್ಟ ಪತ್ರಿಕಾ ಬರವಣಿಗೆಯ ಸಂಗ್ರಹವನ್ನೂ ಅಲನ ನಿರ್ವಹಿಸಿದ್ದರು. ಅವರ ಮನೆಯ ಅಡುಗಮನೆ, ಬಚ್ಚಲು ಮನೆಯಲ್ಲೂ ಕಲಾಪುಸ್ತಕಗಳ,ಪುಸ್ತಕಗಳ ಸಂಗ್ರಹ ರಾಶಿ ಇರುತ್ತಿತ್ತು, ಈಗಲೂ ಹಾಗೆಯೇ ಇದೆ. “ನಾನು ತೀರಿಕೊಂಡ ಮೇಲೆ ಅದನ್ನು ಏನಾದರೂ ಮಾಡಿಕೋ ಎಂದು ಮಗನಿಗೆ ಹೇಳಿದ್ದೇನೆ, ಅಥವ ನಿಮ್ಮ ಚಿತ್ರಕಲಾ ಪರಿಷತ್ತಿನ ಗ್ರಂಥಾಲಯಕ್ಕೆ ಬಿಟ್ಟಿಯಾಗಿ ತೆಗೆದುಕೊಳ್ಳಿ. ಇಲ್ಲದಿದ್ದರೆ ನನ್ನ ಮಗ ಅದನ್ನು ರದ್ದಿಗೆ ಹಾಕುವುದಾಗಿ ಬೆದರಿಸಿದ್ದಾನೆ” ಎಂದಿದ್ದರು. “ಹಾಗಿದ್ದರೆ ನಾವು ಚಿಂದಿ ಆಯುವವರ ವೇಷದಲ್ಲಿ ನಿಮ್ಮ ಮನೆಗೆ ಬರ್ತೇವೆ” ಎಂದಿದ್ದೆ. ಅಲನ ಕೇವಲ ಕಲಾಸಾಹಿತ್ಯವನ್ನು ಸಂಗ್ರಹಿಸಿರಲಿಲ್ಲ, ಬದಲಿಗೆ ಸಂಗ್ರಹಕಾರ್ಯದ ಹಳೆಯ ಸಂಪ್ರದಾಯವೊಂದಕ್ಕೆ ಹೊಸ ರೂಪ ನೀಡುವ ಯತ್ನದಲ್ಲಿದ್ದರು. ಅವರ ವಸತಿ ಒಂದು ವಿಕ್ಷಿಪ್ತ ಕಲಾಪುಸ್ತಕ-ಮನೆಯಾಗಿತ್ತು.

ವಿಶ್ವವಿದ್ಯಾಲಯವೊಂದು ಮಾಡಬೇಕಾದ ಆದರೆ ಇನ್ನೂ ಮಾಡಿಲ್ಲದಂತಹ ಕಾರ್ಯವೊಂದಿದ್ದು, ಮರಿಯವರ ಪುಸ್ತಕಗಳನ್ನು ವಿಶ್ವವಿದ್ಯಾಲಯದ ಶಿಕ್ಷಕರು ಅನೌಪಚಾರಿಕ ಪಠ್ಯಪುಸ್ತಕಗಳನ್ನಾಗಿ ಪರಿಗಣಿಸುವ ಅನಿವಾರ್ಯವೂ ಉಂಟಾದುದಿದೆ. ಸ್ವತಃ ಮರಿಯವರ ಬಗ್ಗೆ ಹಂಪಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರು ಎಂ.ಫಿಲ್ ಕಿರುಸಂಶೋಧನೆಯನ್ನೂ ನಡೆಸಿದ್ದು, ಅವರ ತಲೆಮಾರಿನಲ್ಲಿ ಅಂತಹ ಮನ್ನಣೆಗೆ ಪಾತ್ರರಾದ ಮೊದಲಿಗರು ಅವರು. ’ಸಂಯೋಜಿತ’ ಕಲಾತಂಡವನ್ನು ಕಟ್ಟಿ ಮೂರ್ನಾಲ್ಕು ದಶಕಗಳಿಂದ ಅದರ ಮೂಲಕ ಏಕವ್ಯಕ್ತಿ ಪ್ರದರ್ಶನದಂತೆ ಇವರು ತಮ್ಮದೇ ಶೈಲಿಯಲ್ಲಿ ಚಟುವಟಿಕೆಗಳನ್ನು ನಡೆಸಿದ್ದಿದೆ. ಪದವಿ, ಪಕ್ಷ, ಸಂಘಟನೆ ಇವೆಲ್ಲಕ್ಕೂ ತಮ್ಮನ್ನೇ ಪರ್ಯಾಯವನ್ನಾಗಿಸಿಕೊಂಡದ್ದು ಮರಿಯವರು ಉದ್ದೇಶಪೂರ್ವಕವಾಗಿ ರೂಪಿಸಿಕೊಂಡ ಜೀವನಶೈಲಿಯಾಗಿತ್ತದು. ಕಲಾಸಂಸ್ಥೆಗಳು ತಮ್ಮನ್ನು ಒಬ್ಬಂಟಿಯಾಗಿ ಕಟ್ಟಿಬೆಳೆಸಿದವರ ಕಾಲಾನಂತರ ಅನಾಥವಾಗಿಬಿಡುವುದು ಸ್ವಾತಂತ್ರೋತ್ತರ ಕರ್ನಾಟಕದ ಕಲಾಶಾಲೆಗಳ ಒಟ್ಟಾರೆ ಇತಿಹಾಸದ ಸಾರಾಂಶ. ಈ ಹಿನ್ನೆಲೆಯನ್ನು ಅರಿತಂತೆ ಮರಿಶಾಮಾಚಾರರು ಭೌತಿಕವಾದ ಸಂಘಟನೆಗೆ ಪರ್ಯಾಯವಾಗಿ ಬೆಳೆಸಿದ್ದೇ ’ಸಂಯೋಜಿತ’ವೆಂಬ ಪರಿಕಲ್ಪನೆಯನ್ನು ಮತ್ತು ’ಸಿಎನ್‌ಎನ್’ ಪ್ರಕಾಶನವನ್ನು. ಅಲನ ಸಹ ಅದರ ಭಾಗವಾಗಿದ್ದರು. ಇವರಿಬ್ಬರೂ ಶೈಕ್ಷಣಿಕ ಸಾಂಸ್ಥೀಕರಣದಿಂದ ದೂರವಿದ್ದದ್ದು ಉದ್ದೇಶಪೂರ್ವಕವೆನಿಸುತ್ತದೆ.

ತೀರಾ ಒಂದೆರೆಡು ತಿಂಗಳ ಹಿಂದೆ ಕನ್ನಡದಲ್ಲಿ ನಭೂತೋ ಎಂಬಷ್ಟು ವೆಚ್ಚದ, ಮುನ್ನೂರು ವರ್ಣಪುಟಗಳ ಏಕಕಲಾವಿದರ ಪುಸ್ತಕವನ್ನು (ಎಸ್.ಜಿ.ವಾಸುದೇವರನ್ನು ಕುರಿತದ್ದು) ಸಂಪಾದಿಸಿ, ಅನಂತಮೂರ್ತಿ, ಕಾರ್ನಾಡರಂತವರ ಕೈಯಲ್ಲಿಯೂ ಬರೆಸಿದ ಲೇಖನಗಳನ್ನಳವಡಿಸಿ ಬಿಡುಗಡೆ ಮಾಡಿದ್ದರು ಮರಿ. ಅಕಾಡೆಮಿ, ಯೂನಿವರ್ಸಿಟಿಗಳಿರಲಿ, ಕಲಾವಿದರುಗಳ ಶತಮಾನೋತ್ಸವವನ್ನು ಆಚರಿಸಿದಾಗಲೂ ಅವರುಗಳ ಬಗ್ಗೆ ಸರ್ಕಾರಕ್ಕೂ ಇಂತಹ ಒಂದು ಪುಸ್ತಕವನ್ನು ಇಲ್ಲಿಯವರೆಗೂ ಹೊರತರಲಾಗಿಲ್ಲವೆಂದರೆ, ಮರಿಯವರ ಪರಿಕಲ್ಪನಾ-ಸಂಘಟನಾ ಸಾಹಸದ ಒಂದು ಅಂದಾಜು ಸಿಕ್ಕೀತು. ಮತ್ತೂ ವಿಶೇಷವೆಂದರೆ ಇಂತಹ ಸಾಹಸಗಳಲ್ಲೆಲ್ಲಾ ಮರಿಯವರ ಛಾಪು ಎದ್ದು ಕಾಣುತ್ತಿತ್ತು. ತದ್ವಿರುದ್ಧವಾಗಿ ಅಲನರ ಬರಹ ಅಪರೂಪ ಹಾಗೂ ಸಂಶೋಧನಾತ್ಮಕವಾಗಿರುತ್ತಿತ್ತು. ಓದಿನಷ್ಟು ಸುಲಭವಾಗಿ ಬರೆಯಲಾಗದ ಬಗ್ಗೆ ಪಾಪಪ್ರಜ್ಞೆ ಇಲ್ಲದ ಅಭಿಮಾನವೂ ಅವರಲ್ಲಿದ್ದಿತು (ಕೀರಂ, ಕೈಲಾಸಂ ಮಾದರಿಯಲ್ಲಿ). ’ಅಲೇಖ್ಯ’ ಅಲನರ ಒಂದು ಗುರುತರವಾದ ಕೃತಿ. “ಗುರುಗಳ ತರಹ ಬರೆದಿದ್ದೀರಿ ಅದನ್ನು” ಎಂದು ಆ ಪುಸ್ತಕವನ್ನು ಕುರಿತು ಸಾಹಿತಿ-ಗೆಳೆಯರು ಅವರನ್ನು ತಮಾಷೆ ಮಾಡುತ್ತಿದ್ದರು.

ಮರಿಯವರಿಗೂ ಅಲನರಿಗೂ ಇರುವ ವ್ಯತ್ಯಾಸ ಇದೇ. ಒಬ್ಬರು ಗುಣಾತ್ಮಕತೆಯ ಬದಲು ನಿಯಮಿತ ಕಲಾಪುಸ್ತಕ ಪ್ರಕಟಣೆಯತ್ತ ಮುಖ ಮಾಡಿದ್ದರೆ,ಮತ್ತೊಬ್ಬರು ಈಗಾಗಲೇ ಪ್ರಕಟಿತವಾದುದನ್ನು ಸಂಗ್ರಹಿಸುವ ನೆಲೆಯಲ್ಲಿ ಕಾರ್ಯನಿರತರಾಗಿದ್ದರು. ಹೆಚ್ಚೂಕಡಿಮೆ ಒಂದೇ ವಯಸ್ಸಿನ ಇವರಿಬ್ಬರೂ ಸಾಂಸ್ಥೀಕರಣ, ಅಂದರೆ ಕಲೆಗೆ ಸಂಬಂಧಿಸಿದ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಯಾವುದನ್ನು ಮಾಡಬೇಕಿತ್ತೋ,ಆದರೆ ಮಾಡುತ್ತಿಲ್ಲವೋ, ಅವುಗಳನ್ನೇ ಪಟ್ಟಿಮಾಡಿ, ಇವರಿಬ್ಬರೂ ಅದರ ತುರ್ತನ್ನು ಪೂರೈಸುತ್ತಿದ್ದರು. ವ್ಯವಸ್ಥೆಯ ಒಳಗಿದ್ದುಕೊಂಡೇ ವ್ಯತಿರಿಕ್ತವಾಗಿರುವುದೆಂದರೆ ಇದೇ. ಇದು ಅವರಿಬ್ಬರಿಗೂ ಅವರ ಗುರುಗಳಾದ ಹಡಪದರದ್ದೇ ಆದ ನಿರ್ದಿಷ್ಟ ಕೊಡುಗೆ.

ಇಂಗ್ಲೀಷ್ ಬರದ ಕೀಳರಿಮೆಯನ್ನೂ ಇವರು ಇತ್ಯಾತ್ಮಕವಾಗಿ ದುಡಿಸಿಕೊಂಡಿದ್ದರು. ಆದ್ದರಿಂದಲೆ ಇವರಿಬ್ಬರ ಬರಹಗಳು ಅನ್ಯದಿಂದ ಕನ್ನಡಕ್ಕೆ ಬಂದವೇ ಹೊರತು ಇಲ್ಲಿಂದ ಅಲ್ಲಿಗೆ ಹೋಗಲಿಲ್ಲ. ಇವರಿಬ್ಬರೂ ಕಾರ್ಯನಿರತರಾಗಿದ್ದ ಕಾಲಘಟ್ಟದಲ್ಲಿ ಕರ್ನಾಟಕದ ದೃಶ್ಯಕಲೆಯಲ್ಲಿ ಒಬ್ಬ ಹೆಬ್ಬಾರ್, ಕೆ.ಜಿ.ಸುಬ್ರಹ್ಮಣ್ಯನ್, ರಾಜ್‌ಕುಮಾರ್, ಶಂಕರ‍್ನಾಗ್, ಬಂಡಾಯ ಚಳುವಳಿ, ಜಾತಿ ಸಂವಾದ, ಬೂಸಾ ಚಳುವಳಿಯ ವಾಗ್ವಾದ, ಗೋಕಾಕ್ ಚಳುವಳಿಯ ಪ್ರಭಾವಳಿ, ಕಾಸರವಳ್ಳಿ, ಜ್ಞಾನಪೀಠಗಳು, ಹಂಪಿ ಕನ್ನಡ ವಿಶ್ವವಿದ್ಯಾಲಯಗಳೆಲ್ಲವೂ ಆಗುತ್ತಿದ್ದರೂ, ಅವುಗಳಿಗೆ ಸ್ಪಂದಿಸಿದ ಇವರಿಬ್ಬರ ಪ್ರತಿಕ್ರಿಯೆಗಳು ಏಕಪ್ರಕಾರವಾಗಿರುತ್ತಿದ್ದವು: ಭೌತಿಕ ಅವಕಾಶಗಳನ್ನು ಕಲಾವಿದರು, ಕಲಾಸಾಹಿತಿಗಳಿಗೆ ಮರಿ ನೀಡುತ್ತಿದ್ದರೆ, ಅಂತಹವರ ಭೌತಿಕ ಬೆಳವಣಿಗೆಗಳನ್ನು ತೀಕ್ಷ್ಣವಾಗಿ ಅಲನ ನಿರುಕಿಸುತ್ತಿದ್ದರು. ಇವರಿಬ್ಬರೂ ’ದೃಶ್ಯಕಲೆ ಎಂಬುದು ಒಂದು ಪವಿತ್ರ ಕ್ಷೇತ್ರವಾಗಿದ್ದು, ಅವುಗಳಿಗೆ ಅಂತರ್ ಶಿಸ್ತೀಯತೆ ಅಪಾಯಕಾರಿ’ ಎಂಬರ್ಥದ ’ಕಲೆಗಾಗಿ ಕಲೆ’ ಎಂಬ ನಂಬಿಕೆಯನ್ನು ಆಳವಾಗಿ ಅಪ್ಪಿಕೊಂಡಿದ್ದರು. ಇತರೆ ರಂಗದವರೊಡನೆ ಅತಿಯಾಗಿ ಬೆರೆತವರೂ ಇವರಿಬ್ಬರೇ (ಮರಿ ಕನ್ನಡ ಸಂಸ್ಕೃತಿ ಇಲಾಖೆಯಲ್ಲಿದ್ದರೆ ಅಲನ ಇತಿಹಾಸ, ಪ್ರಾಗೈತಿಹಾಸ, ಗೆಝೆಟಿಯರ್ ಮುಂತಾದ ರಂಗಗಳ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು). ಅಷ್ಟಾದರೂ ಕರ್ನಾಟಕದ ದೃಶ್ಯಕಲೆಯ ವಾಗ್ವಾದದಲ್ಲಿ ಜಾತಿ, ವರ್ಣ, ಸಮಾಜೋ-ರಾಜಕಾರಣದ ನೆಲೆಗಳಿಂದ ಬಣ್ಣ ಮಾಸಬಾರದಿರಲಿ ಎಂಬ ಹಠವನ್ನು ತಮ್ಮ ಬರವಣಿಗೆಗಳಲ್ಲಿ ಪ್ರತಿಪಾದಿಸಿಬಿಟ್ಟಿದ್ದರು. ಅರ್ಥಾತ್, ಇವರಿಬ್ಬರ ಬರವಣಿಗೆಯಲ್ಲಿ ಸೌಂದರ್ಯಶಾಸ್ತ್ರೀಯ ನೆಲೆಯೇ ದೃಶ್ಯಕಲೆಗೆ ಪ್ರಶಸ್ತ್ರ ಎಂಬ ತತ್ವವನ್ನು ಸಾರಿ ಸಾರಿ ಹೇಳಿದ್ದಾರೆ. ಇವರುಗಳ ನಿಲುವುಗಳನ್ನು ಚರ್ಚಿಸುವ ಬದಲು, ಅವುಗಳ ಆಳ ಅರಿವುಗಳನ್ನಷ್ಟೇ ನಾವೀಗ ಶೋಧಿಸಬೇಕಿರುವುದು. ದೃಶ್ಯಕಲೆಯ ’ಸ್ವಾಯತ್ತತೆಯ’ ಸಾಧ್ಯತೆಗಳ ಕಡೆಗೆ ಇರುತ್ತಿತ್ತು ಇವರ ಕಲಾಚಟುವಟಿಕೆಗಳು (ಚಿತ್ರರಚನೆ, ಛಾಯಾಗ್ರಹಣ, ಸಾಹಿತ್ಯ ಸೃಷ್ಟಿ, ಖ್ಯಾತ ಕಲಾವಿದರ, ಹೊತ್ತುಗೆಗಳ ಸಂಗ್ರಹ, ಸಾಂಸ್ಕೃತಿಕ ಸಂಪಾದನೆ?ಇವರಿಬ್ಬರಲ್ಲೂ ಇದ್ದ ಮತ್ತೂ ಹಲವು ಸಾಮಾನ್ಯ ಅಂಶಗಳು).

ಇಂದು ಇವರಿಬ್ಬರೂ ಅಕಾಲಿಕ ಮರಣವನ್ನಪ್ಪಿದ್ದಾರೆ, ಕ್ರಿಕೆಟ್ಟಿನಲ್ಲಿ ಇಬ್ಬರು ಓಪನರ್‌ಗಳೂ ಒಮ್ಮೆಲೆ ನಿವೃತ್ತರಾದಂತೆ ಇದು. ಕನ್ನಡಿಗರಿಗೆ ಕಲಾಗ್ರಾಮ, ದೃಶ್ಯಕಲೆಗೇ ಒಂದು ಸ್ವಾಯತ್ತ ವಿಶ್ವವಿದ್ಯಾಲಯ ಮುಂತಾದ ಯೋಜನೆಗಳು ಈಗಷ್ಟೇ ಆರಂಭಗೊಳ್ಳುವ ಹೊತ್ತಿಗೆ, ಸಾಧಾರಣವಾಗಿ ಒಟ್ಟಿಗಿರಲೊಲ್ಲದ ಕಲಾವಿದರನ್ನೆಲ್ಲ ಒಂದರ್ಥದಲ್ಲಿ, ಆದರೆ ಎರಡು ವಿಧದಲ್ಲಿ ಒಂದೆಡೆ ಅರ್ಥಪೂರ್ಣವಾಗಿ ಸೇರಿಸುವ ಛಾತಿಯುಳ್ಳ ಕೆಲವೇ ಸಾಮೂಹಿಕ ಪಜ್ಞೆಯ ಕಲಾವಿದರಲ್ಲಿ ಇಬ್ಬರು ಉದ್ದುಗಿಗಳು ಇಲ್ಲವಾಗಿದ್ದಾರೆ. ಆದ್ದರಿಂದ ಇವರಿಬ್ಬರೂ ಒಟ್ಟಿಗೆ ತಂದೊಡ್ಡಿರುವ ಸಮಸ್ಯೆಗಳು ಎರಡು: ಇವರಿಬ್ಬರೂ ತಮ್ಮದೇ ನಿರ್ದಿಷ್ಟ ಶೈಲಿಯಲ್ಲಿ ನಿರ್ವಹಿಸುತ್ತಿದ್ದ ಕಲಾಕಾಯಕವನ್ನು ಮುಂದುವರೆಸುವವರು ಯಾರು? ಮತ್ತು ಇವರಿಬ್ಬರೂ ಇಲ್ಲಿಯವರೆಗೂ ಮಾಡಿರುವ ಕಲಾಕೈಂಕರ್ಯವನ್ನೇ ದಾಖಲಿಸುವವರಾರು? ಮತ್ತೆ ಹಾಗೆ ಮಾಡುವಾಗ, ಇವರಿಬ್ಬರೂ ಹಾಕಿಕೊಟ್ಟಿರುವ ಮಾದರಿಗಳನ್ನು ಮೀರುವುದೆಂತು?

’ನಡೆದಾಡುವ ಕಲಾಕೋಶ’ ಎಂಬ ಅಭಿನಂದನ ಗ್ರಂಥವನ್ನು ಮರಿಯವರ ಬಗ್ಗೆ ಈಗಾಗಲೇ ಪ್ರಕಟಿಸಿದ್ದಾಗಿದೆ. ಅಲನರ ಬಗ್ಗೆ ಓ.ವೆಂಕಟೇಶ್ ಇಂತಹುದೇ ಪುಸ್ತಕವನ್ನು ತರಬೇಕು ಎಂದಾಗ, ಅದರ ಸಂಪಾದಕ ಗೆಳೆಯ ಕಲಾ ಇತಿಹಾಸಕಾರ ಆರ್.ಎಚ್.ಕುಲಕರ್ಣಿ ತಮಾಷೆ ಮಾಡಿದ್ದು ಹೀಗೆ, “ಎಲ್ಲರ ಕೈಲೂ ಅಲನರ ಬಗ್ಗೆ ಬರೆಸುವಷ್ಟರಲ್ಲಿ ’ಅಭಿನಂದನ ಗ್ರಂಥ’ವು ’ಸ್ಮರಣ ಸಂಚಿಕೆ’ಯಾದೀತು. ಹಾಸ್ಯ ಸಾವಿನಲ್ಲಿ ಸತ್ಯವನ್ನು ಕಂಡುಕೊಳ್ಳುವುದಕ್ಕೆ ದೃಶ್ಯಕಲಾ ರಂಗದ ನಡಾವಳಿಯೇ ಕಾರಣವಿರಬಹುದು, ಅದೂ ಮರಿ ಮತ್ತು ಅಲನ ಅವರಿಬ್ಬರೂ ಬಿಟ್ಟುಹೋದ ಮಾದರಿಯ ನಡಾವಳಿಯೇ ಇದಕ್ಕೆ ಕಾರಣವಾಗಿರಬಹುದು.

–ಎಚ್.ಎ. ಅನಿಲ್ ಕುಮಾರ್
ಕಲಾ ವಿಮರ್ಶಕ

Join the Conversation

1 Comment

Leave a comment

This site uses Akismet to reduce spam. Learn how your comment data is processed.